ಮಹಿಳಾ ಐಎಎಸ್ ಅಧಿಕಾರಿಗೇ ಬೆದರಿಕೆ ಹಾಕಿದ ಅಕ್ರಮ ಮರಳುಗಾರಿಕೆ ಮಾಫಿಯಾ

Update: 2017-02-09 14:38 GMT

ಬುಂದೇಲ್ ಖಂಡ್ , ಫೆ. 9 : ಮಧ್ಯ ಪ್ರದೇಶದಲ್ಲಿ ಗಣಿ ಮಾಫಿಯಾದ ಗೂಂಡಾಗಿರಿ ಮೇರೆ ಮೀರಿದೆ. ಅದು ಈಗ ಎಲ್ಲಿಗೆ ತಲುಪಿದೆಯೆಂದರೆ, ಮಹಿಳಾ ಐಎಎಸ್ ಅಧಿಕಾರಿಗೇ ಬೆದರಿಕೆ ಹಾಕಿ ಅವಹೇಳನ ಮಾಡಿರುವ ಘಟನೆ ನಡೆದಿದೆ. ಇಲ್ಲಿನ ಛತ್ರಪುರ ಜಿಲ್ಲೆಯ ಬಾಮಿತ ಠಾಣಾ ವ್ಯಾಪ್ತಿಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. 

ಇಲ್ಲಿನ ಸಬ್ ಡಿವಿಜನಲ್ ಮ್ಯಾಜಿಸ್ಟ್ರೇಟ್ ಸೋನಿಯಾ ಮೀನಾ ಅಕ್ರಮ ಗಣಿಗಾರಿಕೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದ್ದರು. ಇದರಿಂದಾಗಿ ಈ ಅಕ್ರಮ ಗಣಿ ಮಾಫಿಯಾದ ಕೆಂಗಣ್ಣಿಗೂ ಗುರಿಯಾಗಿದ್ದರು. 

ಬುಧವಾರ ದಿನವಿಡೀ ಅಕ್ರಮ ಗಣಿಗಾರಿಕೆ ಮಾಡುವವರ ವಿರುದ್ಧ ಕಾರ್ಯಾಚರಣೆ ನಡೆಸಿದ ಬಳಿಕ ಸಂಜೆ ಸುಮಾರು ಐದು ಗಂಟೆಗೆ ತನ್ನ ಕಚೇರಿಗೆ ತೆರಳುತ್ತಿದ್ದರು. ಅಕ್ರಮ ಮರಳುಗಾರಿಕೆ ಮಾಡುತ್ತಿದ್ದ ಟ್ರ್ಯಾಕ್ಟರ್ ಒಂದನ್ನು ಜಪ್ತಿ ಮಾಡಿದ್ದು ಅದನ್ನು ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗುವಂತೆ ಸೋನಿಯಾ ಆದೇಶ ನೀಡಿದ್ದರು. ಆಗ ಅಲ್ಲಿಗೆ ಬಂದ ಟ್ರ್ಯಾಕ್ಟರ್ ಮಾಲಕ ಹಾಗು ಅಕ್ರಮ ಗಣಿ ಮಾಫಿಯಾದ ಅರ್ಜುನ್ ಸಿಂಗ್ ಅಲ್ಲಿಗೆ ಬಂದು ರೌದ್ರಾವತಾರ ತಾಳಿಬಿಟ್ಟ. 

ಅಲ್ಲಿಗೆ ಬಂದ ಕೂಡಲೇ ತನ್ನ ಟ್ರ್ಯಾಕ್ಟರ್ ನಲ್ಲಿ ಕುಳಿತ ಪೊಲೀಸ್ ಸಿಬ್ಬಂದಿ ಭಗವಂತ್ ಯಾದವ್ ಮೇಲೆ ಬಂದೂಕು ತೋರಿಸಿದ. ಬಳಿಕ ಟ್ರ್ಯಾಕ್ಟರ್ ನಲ್ಲಿ ಕುಳಿತು ಅದನ್ನು ಚಲಾಯಿಸಿ ತೆಗೆದುಕೊಂಡು ಹೋಗಲು ಪ್ರಾರಂಭಿಸಿದ. ಹೀಗೆ ಮಾಡಬೇಡಿ ಎಂದು ಎಸ್ ಡಿ ಎಮ್  ಸೋನಿಯಾ ಅವರು ಅರ್ಜುನ್ ಸಿಂಗ್ ಗೆ ಹೇಳಿದಾಗ ಆತ ಗಾಳಿಯಲ್ಲಿ ಗುಂಡು ಹಾರಿಸಿ ಮಹಿಳಾ ಅಧಿಕಾರಿಗೆ ಅವಾಚ್ಯ ಪದ ಬಳಸಿ ಅವಹೇಳನ ಮಾಡಿದ್ದಾನೆ. 

ಆಗ ಅದನ್ನು ತಡೆಯಲು ಬಂದ ಇನ್ನೊಬ್ಬ ಪೊಲೀಸ್ ಸಿಬ್ಬಂದಿಯನ್ನು ಅರ್ಜುನ್ ದೂಡಿ ಹಾಕಿದ್ದಾನೆ. ಬಳಿಕ ಎಲ್ಲರ ಎದುರಲ್ಲೇ ಐಎಎಸ್ ಅಧಿಕಾರಿಗೆ ಬೆದರಿಕೆ ಹಾಕಿ ತನ್ನ ಟ್ರ್ಯಾಕ್ಟರ್ ಅನ್ನು ಅಲ್ಲಿಂದ ತೆಗೆದುಕೊಂಡು ಹೋಗಿದ್ದಾನೆ. ವಿಪರ್ಯಾಸವೆಂದರೆ ಈ ಘಟನೆ ಪೊಲೀಸ್ ಠಾಣೆಯಿಂದ ಕೇವಲ 500 ಮೀಟರ್ ದೂರದಲ್ಲಿ ನಡೆದಿದೆ. 

ತಕ್ಷಣ ಅಲ್ಲಿಂದ ಪೊಲೀಸ್ ಠಾಣೆಗೆ ಹೋದ ಸೋನಿಯಾ ಅರ್ಜುನ್ ಸಿಂಗ್ ನನ್ನ ಬಂಧಿಸಿ ಆತನ ಬಂದೂಕು ಪರವಾನಿಗೆ ರದ್ದು ಪಡಿಸುವಂತೆ ಅಲ್ಲಿದ್ದ ಠಾಣಾಧಿಕಾರಿ ಎಸ್ .ಪಿ. ಸಿಂಗ್ ಸಿಸೋಡಿಯಾ ಅವರಿಗೆ ಆದೇಶ ನೀಡಿದರು. ಬಳಿಕ ಹಿರಿಯಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ತಕ್ಷಣ ಭೇಟಿ ನೀಡಿದ ಹಿರಿಯಧಿಕಾರಿ ಮೊಹಮ್ಮದ್ ಇಸ್ರಾರ್ ಮನ್ಸೂರಿ ಅವರು ಕಾರ್ಯಾಚರಣೆಗೆ ನಿರ್ದೇಶನ ನೀಡಿದರು. ಆದರೆ ಈವರೆಗೆ ಅರ್ಜುನ್ ಸಿಂಗ್ ಬಂಧನ ಆಗಿಲ್ಲ. 

ಆದರೆ ಮಹಿಳಾ ಅಧಿಕಾರಿ ಮೇಲೆ  ಅರ್ಜುನ್ ಸಿಂಗ್ ಗೂಂಡಾಗಿರಿಯನ್ನು ಸುದ್ದಿಯಾಗದಂತೆ ತಡೆಯಲು ಅಧಿಕಾರಿ ವರ್ಗವೇ ಪ್ರಯತ್ನಿಸುತ್ತಿದೆ ಎಂದು ತಿಳಿದು ಬಂದಿದೆ. ನೂರಾರು ಜನರು ಹಾಗು ಪೊಲೀಸ್ ಸಿಬ್ಬಂದಿಯೆದುರೇ ಅರ್ಜುನ್ ಸಿಂಗ್ ಮಹಿಳಾ ಐಎಎಸ್ ಅಧಿಕಾರಿ ವಿರುದ್ಧ ಗೂಂಡಾಗಿರಿ ಮಾಡಿದ್ದರೂ ಆತ ಕೇವಲ ಪೊಲೀಸ್ ಸಿಬ್ಬಂದಿ ಜೊತೆ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಅಲ್ಲಿನ ಎಎಸ್ಪಿಯೇ ಹೇಳಿಕೆ ನೀಡಿರುವುದು ಸಂಶಯಕ್ಕೆ ಎಡೆ ಮಾಡಿದೆ. 

ಅರ್ಜುನ್ ಸಿಂಗ್ ವಿರುದ್ಧ ಐಪಿಸಿ 334, 332, 386, 294, 506B, 34 ಕಲಂ ಗಳ ಅನ್ವಯ ಪ್ರಕರಣ ದಾಖಲಾಗಿದೆ. ಇಲ್ಲಿ ನಡೆಯುವ ಅಕ್ರಮ ಮರಳುಗಾರಿಕೆಗೆ ಎಲ್ಲ ಪಕ್ಷಗಳ ನಾಯಕರ ಬೆಂಬಲ ಇರುವುದೂ ಅಧಿಕಾರಿಗಳ ನಿಷ್ಕ್ರಿಯತೆಗೆ ಇನ್ನೊಂದು ಕಾರಣ ಎಂದು ಹೇಳಲಾಗಿದೆ. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News