ಮಸೂದ್ ನಿಷೇಧಕ್ಕೆ ತಡೆ : ಚೀನಾ ಸಮರ್ಥನೆ
ಬೀಜಿಂಗ್, ಫೆ.9: ಪಠಾಣ್‌ಕೋಟ್ ದಾಳಿಯ ರೂವಾರಿ ಹಾಗೂ ಜೆಇಎಂ ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ವಿಶ್ವಸಂಸ್ಥೆಯಲ್ಲಿ ಘೋಷಿಸುವ ಅಮೆರಿಕದ ಪ್ರಸ್ತಾವನೆಯನ್ನು ತಡೆಹಿಡಿದಿರುವ ತನ್ನ ನಿಧಾರರ್ವನ್ನು ಚೀನಾ ಸಮರ್ಥಿಸಿಕೊಂಡಿದೆ.
ಮಾಧ್ಯಮದವರೊಂದಿಗೆ ಮಾತನಾಡಿದ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲು ಕಾಂಗ್, ಈ ಕುರಿತಂತೆ ಒ ್ಮುತ ಮೂಡಿಲ್ಲ ಎಂದು ತಿಳಿಸಿದರು.
ಪ್ರಸ್ತಾವನೆಯನ್ನು ಬೆಂಬಲಿಸಲು ಚೀನಾದ ಷರತ್ತನ್ನು ಪೂರೈಸಿಲ್ಲ ಎಂವರು ಹೇಳಿದರು. ಕಳೆದ ಬಾರಿ ವಿಶ್ವಸಂಸ್ಥೆ ಭದ್ರತಾ ಮಂಡಳಿಯ 1,267 ಸಮಿತಿಗಳು ಈ ವಿಷಯದ ಕುರಿತು ಚರ್ಚೆ ನಡೆಸಿದ್ದು ಚರ್ಚೆಯಲ್ಲಿ ಯಾವುದೇ ಒಮ್ಮತಾಭಿಪ್ರಾಯ ಮೂಡಿಬಂದಿಲ್ಲ ಎಂದವರು ತಿಳಿಸಿದರು.
ತಾಂತ್ರಿಕ ಕಾರಣದಿಂದ ನಾವು ಈ ಪ್ರಸ್ತಾವನೆಯನ್ನು ತಡೆದಿದ್ದೇವೆ. ಸಂಬಂಧಿತ ಪಕ್ಷಗಳು ಪರಸ್ಪರ ಚರ್ಚಿಸಲು ಹೆಚ್ಚಿನ ಅವಕಾಶ ನೀಡುವುದು ನಮ್ಮ ಉದ್ದೇಶವಾಗಿದೆ ಎಂದವರು ಹೇಳಿದರು. ಪಾಕ್ ಮೂಲದ ಮಸೂದ್ ಅಜರ್‌ನನ್ನು ನಿಷೇಧಿಸುವ ಪ್ರಸ್ತಾವನೆಯನ್ನು ಈ ಬಾರಿ ಅಮೆರಿಕಾ ಮುಂದಿರಿಸಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಯಾರೇ ಪ್ರಸ್ತಾವನೆ ಮುಂದಿರಿಸಲಿ , ಸಮಿತಿಗೆ ಅದರದ್ದೇ ಆದ ನಿಯಮಗಳಿವೆ .
ಭದ್ರತಾ ಮಂಡಳಿಯ ನೀತಿ ನಿಯಮಗಳಿಗೆ ಅನುಸಾರವಾಗಿ ಸಮಿತಿ ಕಾರ್ಯ ನಿರ್ವಹಿಸಲಿದೆ ಎಂದರು. ಇದರಿಂದ ಭಾರತ-ಚೀನಾ ಸಂಬಂಧದ ಮೇಲೆ ಪರಿಣಾಮ ಬೀರುವುದಿಲ್ಲವೇ ಎಂಬ ಪ್ರಶ್ನೆಗೆ, ಯಾವುದೇ ಋಣಾತ್ಮಕ ಪರಿಣಾಮ ಬೀರದು ಎಂದು ನಾವು ಆಶಿಸುತ್ತಿದ್ದೇವೆ ಎಂದು ಉತ್ತರಿಸಿದರು.
ಪಾಕಿಸ್ತಾನದ ಕೋರಿಕೆಯಂತೆ ಚೀನಾ ಈ ರೀತಿ ಮಾಡುತ್ತಿದೆ ಎಂಬ ಟೀಕೆಗೆ ಉತ್ತರಿಸಿದ ಲು ಕಾಂಗ್, ಭದ್ರತಾ ಮಂಡಳಿಯ ಕಾರ್ಯವಿಧಾನ ಮತ್ತು ನಿಯಮದ ಅನುಸಾರ ಚೀನಾ ಕಾರ್ಯ ನಿರ್ವಹಿಸುತ್ತಿದೆ ಎಂದರು. ಭಾರದತೊಂದಿಗೆ ಈ ವಿಷಯದ ಕುರಿತು ಹಲವು ಸುತ್ತಿನ ಮಾತುಕತೆ ನಡೆಸಿದ ಬಳಿಕ ತಾಂತ್ರಿಕ ಕಾರಣದಿಂದ ಪ್ರಸ್ತಾವನೆಯನ್ನು ತಡೆಹಿಡಿಯಲಾಗಿದೆ.
ಸಂಬಂಧಿತ ಪಕ್ಷಗಳು ಪರಸ್ಪರ ಚರ್ಚಿಸಲು ಹೆಚ್ಚಿನ ಕಾಲಾವಕಾಶ ನೀಡುವುದು ನಮ್ಮ ಉದ್ದೇಶವಾಗಿದೆ ಎಂದ ಅವರು, ಈ ವರ್ಷವಾದರೂ ಈ ವಿಷಯದ ಕುರಿತ ಗೊಂದಲ ಬಗೆಹರಿದೀತೇ ಎಂಬ ಪ್ರಶ್ನೆಗೆ, ಇದರಲ್ಲಿ ಸಮಯದ ಪ್ರಶ್ನೆ ಬರುವುದಿಲ್ಲ. ಎಷ್ಟು ಬೇಗ ಒಮ್ಮತ ಮೂಡುತ್ತದೆ ಎಂಬುದು ಪ್ರಮುಖವಾಗಿದೆ ಎಂದರು.
ಅಜರ್ ಮೇಲೆ ನಿಷೇಧದ ಕುರಿತ ಪ್ರಸ್ತಾವನೆಯನ್ನು ಮೂರನೇ ಬಾರಿ ಚೀನಾ ತಿರಸ್ಕರಿಸಿದಂತಾಗಿದೆ.