ನಾಳೆಯಿಂದ ಎಬಿವಿಪಿಯಿಂದ ಹೋರಾಟ

Update: 2017-02-09 18:35 GMT

ಮಂಗಳೂರು, ಫೆ.9: ಮಂಗಳೂರು ವಿಶ್ವವಿದ್ಯಾನಿಲಯದ 2015-16 ಮತ್ತು 2016-17ನೆ ಸಾಲಿನ ಪರೀಕ್ಷೆಗಳ ಫಲಿತಾಂಶ ದಲ್ಲಿ ಗೊಂದಲ ಸೃಷ್ಟಿಯಾಗಿದ್ದು, ಅಸಮರ್ಪಕ ಫಲಿತಾಂಶ ಪ್ರಕಟನೆಯಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆರೋಪಿಸಿದೆ.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಬಿವಿಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಹಿತೇಶ ಬೇಕಲ್, ವಿದ್ಯಾರ್ಥಿಗಳ ಭವಿಷ್ಯದಲ್ಲಿ ವಿಶ್ವವಿದ್ಯಾನಿಲಯ ಚೆಲ್ಲಾಟ ಆಡುತ್ತಿದೆ. ವಿಶ್ವವಿದ್ಯಾನಿಲಯದ ಪರೀಕ್ಷಾ ವ್ಯವಸ್ಥೆಯ ಮೇಲೆ ಸಂಶಯ ಮೂಡುವಂತಾಗಿದೆ ಎಂದರು.

 ವಿಶ್ವವಿದ್ಯಾನಿಲಯ ವಿದ್ಯಾರ್ಥಿಯೊಬ್ಬನ ಫಲಿತಾಂಶ ಪ್ರಕಟಿಸಲು ಹೊರಗುತ್ತಿಗೆ ಸಂಸ್ಥೆಗೆ ರೂ.120 ಖರ್ಚು ಮಾಡುತ್ತಿದೆ. ಹಿಂದೆ ರೂ.60 ವೆಚ್ಚ ಮಾಡಿ ಗೊಂದಲ ರಹಿತ ಫಲಿತಾಂಶ ಪ್ರಕಟಿಸಲು ಸಾಧ್ಯವಾಗುತ್ತಿತ್ತು. ಕೆಲವು ವಿದ್ಯಾರ್ಥಿ ಗಳ ಅಂಕ ಪಟ್ಟಿ ಇನ್ನೂ ಸಿಕ್ಕಿಲ್ಲ. ಮತ್ತೆ ಕೆಲವರ ಫಲಿತಾಂಶವೇ ಪ್ರಕಟವಾಗಿಲ್ಲ. ಇವು ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಚಿಂತೆಗೀಡು ಮಾಡಿದೆ ಎಂದು ಹಿತೇಶ್ ದೂರಿದರು.

ಪರೀಕ್ಷಾ ಗೊಂದಲವನ್ನು ಎಬಿವಿಪಿಯು ಕುಲಪತಿಯವರ ಗಮನಕ್ಕೆ ತಂದಿದ್ದರೂ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಆದ್ದರಿಂದ ಎರಡು ವರ್ಷಗಳ ಪರೀಕ್ಷಾ ಪ್ರಕ್ರಿಯೆಯನ್ನು ರಾಜ್ಯಪಾಲರು ತನಿಖೆಗೆ ಆದೇಶಿಸಬೇಕು ಎಂದವರು ಆಗ್ರಹಿಸಿದರು.

ವಿವಿ ಪರೀಕ್ಷಾಂಗ ಕುಲಸಚಿವರ ರಾಜೀನಾಮೆಗೆ ಒತ್ತಾಯಿಸಿ ದ.ಕ, ಉಡುಪಿ ಮತ್ತು ಕೊಡಗು ಜಿಲ್ಲೆಗಳ ಪದವಿ ವಿದ್ಯಾರ್ಥಿಗಳು ಫೆ.11ರಿಂದ ನಿರಂತರ ಹೋರಾಟ ನಡೆಸಲಿದ್ದು, ಅಗತ್ಯಬಿದ್ದಲ್ಲಿ ವಿವಿಗೂ ಮುತ್ತಿಗೆ ಹಾಕುವುದಾಗಿ ಹಿತೇಶ್ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಎಬಿವಿಪಿ ಪದಾಕಾರಿಗಳಾದ ಮೋಹಿತ್ ಎಸ್., ಚೇತನ್ ಪಡೀಲ್, ಪ್ರಮೋದ್, ಅನುಷ್ಕಾ ಕೊಟ್ಟಾರಿ, ಶೀತಲ್‌ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News