ಹೆಜಮಾಡಿ ಟೋಲ್ ಗೇಟ್ ವಿರುದ್ಧ ಮತ್ತೆ ಸಿಡಿದೆದ್ದ ಸ್ಥಳೀಯರು

Update: 2017-02-10 05:33 GMT

ಪಡುಬಿದ್ರೆ, ಫೆ.10: ರಾಷ್ಟ್ರೀಯ ಹೆದ್ದಾರಿಯ ಹೆಜಮಾಡಿಯಲ್ಲಿ ಸ್ಥಾಪಿತ ನೂತನ ಟೋಲ್ ಪ್ಲಾಝಾದಲ್ಲಿ ಗುರುವಾರ ಮಧ್ಯರಾತ್ರಿಯಿಂದ ಟೋಲ್ ಸಂಗ್ರಹ ಆರಂಭಿಸಲಾಗಿದ್ದು, ಇದನ್ನು ವಿರೋಧಿಸಿ ಸ್ಥಳೀಯರು ಇಂದು ಬೆಳಗ್ಗೆ ಪ್ರತಿಭಟನೆ ನಡೆಸಿದರು.

ಹೆಜಮಾಡಿ ನಾಗರಿಕ ಸಮಿತಿಯ ನೇತೃತ್ವದಲ್ಲಿ ನಡೆದ ಪ್ರತಿಭಟನೆಗೆ ಸ್ಥಳೀಯ ನಾಗರಿಕರು, ಬಸ್ ಮಾಲಕರ-ಚಾಲಕರ ಸಂಘ, ರಿಕ್ಷಾ ಚಾಲಕ-ಮಾಲಕರ ಸಂಘ, ಟೆಂಪೊ ಚಾಲಕ-ಮಾಲಕರ ಸಂಘ ಬೆಂಬಲ ನೀಡಿದ್ದು, ನೂರಾರು ಮಂದಿ ಟೋಲ್ ಗೇಟ್ ಎದುರು ಜಮಾಯಿಸಿ ಟೋಲ್ ಸಂಗ್ರಹದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನವಯುಗ ಕಂಪೆನಿ ನಡೆಸಿರುವ ಹೆದ್ದಾರಿ ಕಾಮಗಾರಿ ಅವೈಜ್ಞಾನಿಕವಾಗಿದೆ. ಕೆಲವೆಡೆ ಕಾಮಗಾರಿ ಅಪೂರ್ಣವಾಗಿದೆ. ಸರ್ವಿಸ್ ರಸ್ತೆ ನಿರ್ಮಾಣ ಆಗಿಲ್ಲ. ಆದ್ದರಿಂದ ಕಾಮಗಾರಿ ಸಂಪೂರ್ಣಗೊಳಿಸದೆ ಟೋಲ್ ಸಂಗ್ರಹಕ್ಕೆ ಅವಕಾಶ ನೀಡುವುದಿಲ್ಲ ಎಂದ ಪ್ರತಿಭಟನಕಾರರು ಟೋಲ್ ಸಂಗ್ರಹಕ್ಕೆ ಅಡ್ಡಿಪಡಿಸಿದರು.

ಈ ಸಂದರ್ಭ ಸ್ಥಳಕ್ಕಾಗಮಿಸಿದ ಉಡುಪಿ ತಹಶೀಲ್ದಾರ್ ಮಹೇಶ್ಚಂದ್ರ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು. ರಾಷ್ಟ್ರೀಯ ಹೆದ್ದಾರಿಯ 80 ಶೇ. ಕಾಮಗಾರಿ ಪೂರ್ಣಗೊಂಡಿರುವುದಾಗಿ ನವಯುಗ ಕಂಪೆನಿ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಟೋಲ್ ಸಂಗ್ರಹಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇದೀಗ ಸಾರ್ವಜನಿಕರ ವಿರೋಧದ ಹಿನ್ನೆಲೆಯಲ್ಲಿ ಫೆ.13ರಂದು ಉಡುಪಿ ಜಿಲ್ಲಾಧಿಕಾರಿಯವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ನವಯುಗ ಕಂಪೆನಿಯ ಅಧಿಕಾರಿ ಸಭೆ ಕರೆದಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಯುವ ಈ ಸಭೆಯಲ್ಲಿ ಸಾರ್ವಜನಿಕರು ಭಾಗವಹಿಸಬಹುದು ಎಂದರು.

ಅಲ್ಲದೆ, ಈ ಸಭೆ ನಡೆಯುವ ಸೋಮವಾರದ ವರೆಗೆ ಉಡುಪಿ ಜಿಲ್ಲೆಯಲ್ಲಿ ನೋಂದಾಯಿತ ಬಿಳಿ ಬಣ್ಣದ ನಂಬರ್ ಪ್ಲೇಟ್ ಹೊಂದಿರುವ ವಾಹನಗಳಿಂದ ಟೋಲ್ ಸಂಗ್ರಹಿಸದಿರುವಂತೆ ಟೋಲ್ ಸಂಗ್ರಹಕಾರ ನವಯುಗ ಕಂಪೆನಿಗೆ ಸೂಚಿಸಿದರು.

ಗುಲಾಂ ಮುಹಮ್ಮದ್, ದೇವಿಪ್ರಸಾದ್ ಶೆಟ್ಟಿ, ವಿಶ್ವಾಸ್ ಅಮೀನ್ ಪ್ರತಿಭಟನೆಯ ನೇತೃತ್ವವನ್ನು ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News