ಅಮೆರಿಕ ವಿರುದ್ಧ ಇರಾನ್‌ನಲ್ಲಿ ಬೃಹತ್ ಪ್ರತಿಭಟನೆ

Update: 2017-02-10 15:10 GMT

ಟೆಹರಾನ್, ಫೆ. 10: ಇರಾನನ್ನು ‘ನಿಗಾದಲ್ಲಿಡಲಾಗಿದೆ’ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಎಚ್ಚರಿಕೆಗೆ ಪ್ರತಿಯಾಗಿ ಆ ದೇಶದ ಸರಕಾರ ತೆಗೆದುಕೊಂಡ ನಿಲುವಿಗೆ ಬೆಂಬಲ ವ್ಯಕ್ತಪಡಿಸಲು ಲಕ್ಷಾಂತರ ಇರಾನಿಯನ್ನರು ಶುಕ್ರವಾರ ಬೀದಿಗಿಳಿದರು ಎಂದು ಸರಾಕರಿ ಟಿವಿ ವರದಿ ಮಾಡಿದೆ.

ಇರಾನ್‌ನ 1979ರ ಇಸ್ಲಾಮಿಕ್ ಕ್ರಾಂತಿಯ ವಾರ್ಷಿಕ ದಿನದಂದು ನೂರಾರು ಸೇನಾ ಸಿಬ್ಬಂದಿ ಮತ್ತು ಪೊಲೀಸರು ಸೇರಿದಂತೆ ಜನರು ಅಮೆರಿಕ ವಿರೋಧಿ ಘೋಷಣೆಗಳನ್ನು ಕೂಗುತ್ತಾ ಟೆಹರಾನ್‌ನಲ್ಲಿರುವ ‘ಆಝಾದಿ (ಸ್ವಾತಂತ್ಯ) ಚೌಕ’ದತ್ತ ನಡೆದರು. ‘ಅಮೆರಿಕಕ್ಕೆ ಸಾವು ಬರಲಿ’ ಎನ್ನುವ ಘೋಷಣಾ ಫಲಕಗಳು ಮತ್ತು ಟ್ರಂಪ್‌ರ ಪ್ರತಿಕೃತಿಗಳನ್ನು ಅವರು ಹಿಡಿದಿದ್ದರು. ಈ ಸಂದರ್ಭದಲ್ಲಿ ಸೇನಾ ಪೊಲೀಸ್ ಬ್ಯಾಂಡ್ ಸಾಂಪ್ರದಾಯಿಕ ಇರಾನಿ ಕ್ರಾಂತಿ ಗೀತೆಗಳನ್ನು ನುಡಿಸಿತು.

1979ರ ಇಸ್ಲಾಮಿಕ್ ಕ್ರಾಂತಿಯಲ್ಲಿ ಅಮೆರಿಕ ಬೆಂಬಲಿತ ಶಾ ಆಡಳಿತದಿಂದ ಇರಾನನ್ನು ಮುಕ್ತಗೊಳಿಸಲಾಗಿತ್ತು.

ಅಮೆರಿಕನ್ನರ ಬೆದರಿಕೆಗಳಿಗೆ ಇರಾನ್ ಹೆದರುವುದಿಲ್ಲ ಎಂಬುದನ್ನು ತೋರಿಸಲು ಪ್ರತಿಭಟನೆಗಳಲ್ಲಿ ಭಾಗವಹಿಸುವಂತೆ ಇರಾನ್‌ನ ಅತ್ಯಂತ ಪ್ರಭಾವಿ ವ್ಯಕ್ತಿ ಸುಪ್ರೀಂ ನಾಯಕ ಆಯತೊಲ್ಲಾ ಖಮೈನಿ ಮಂಗಳವಾರ ಜನರಿಗೆ ಕರೆ ನೀಡಿದ್ದರು.

‘‘ಅಮೆರಿಕ ಮತ್ತು ಟ್ರಂಪ್ ನಮ್ಮನ್ನು ಗದರಿಸಲು ಸಾಧ್ಯವಿಲ್ಲ. ನಮ್ಮ ನಾಯಕ ಖಮೈನಿಗಾಗಿ ನಾವು ನಮ್ಮ ಪ್ರಾಣಗಳನ್ನು ತ್ಯಾಗ ಮಾಡಲು ತಯಾರಿದ್ದೇವೆ’’ ಎಂದು ಪ್ರತಿಭಟನಕಾರರೊಬ್ಬರು ಸರಕಾರಿ ಟಿವಿಗೆ ಹೇಳಿದರು.

‘‘ವಲಯದಲ್ಲಿರುವ ಕೆಲವು ಅನನುಭವಿಗಳು ಮತ್ತು ಅಮೆರಿಕ ಇರಾನನ್ನು ಬೆದರಿಸುತ್ತಿದ್ದಾರೆ. ಇರಾನ್ ಜೊತೆಗೆ ಬೆದರಿಕೆಯ ಭಾಷೆ ಬಳಸುವುದು ಯಾವತ್ತೂ ಯಶಸ್ವಿಯಾಗಿಲ್ಲ’’ ಎಂದು ಆಝಾದಿ ಚೌಕದಲ್ಲಿ ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಇರಾನ್ ಅಧ್ಯಕ್ಷ ಹಸನ್ ರೂಹಾನಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News