'ಔಷಧಿ ಮಾಫಿಯಾ' ಅಂತ್ಯಗೊಳಿಸಲು ಸರಕಾರದ ಶಪಥ
ಹೊಸದಿಲ್ಲಿ,ಫೆ.10: ದೇಶದ ಹಲವು ಭಾಗಗಳಲ್ಲಿ 'ಔಷಧಿ ಮಾಫಿಯಾ 'ದ ಪ್ರಾಬಲ್ಯ ವನ್ನು ಅಂತ್ಯಗೊಳಿಸಲು ಸರಕಾರವು ಬದ್ಧವಾಗಿದೆ ಮತ್ತು ಇದಕ್ಕಾಗಿ ಜನರಿಗೆ ಕೈಗೆಟಕುವ ಬೆಲೆಗಳಲ್ಲಿ ಉತ್ತಮ ಗುಣಮಟ್ಟದ ಔಷಧಿಗಳನ್ನು ಒದಗಿಸಲು ಮಾ.30ರೊಳಗೆ ದೇಶಾದ್ಯಂತ 3,000 ಜನೌಷಧಿ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದು ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವ ಅನಂತ ಕುಮಾರ್ ಅವರು ಶುಕ್ರವಾರ ಇಲ್ಲಿ ತಿಳಿಸಿದರು.
ನ್ಯಾಷನಲ್ ಯುವ ಕೋಆಪರೇಟಿವ್ ಸೊಸೈಟಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಜೆನರಿಕ್ ಔಷಧಿಗಳಿಗೆ ಹೋಲಿಸಿದರೆ ಬ್ರಾಂಡೆಡ್ ಮತ್ತು ಪೇಟೆಂಟ್ ಹೊಂದಿರುವ ಔಷಧಿಗಳಿಗೆ ದೇಶೀಯ ಮತ್ತು ಬಹುರಾಷ್ಟ್ರೀಯ ಕಂಪನಿಗಳು ವಿಧಿಸುತ್ತಿರುವ ದುಬಾರಿ ಬೆಲೆಗಳ ಬಗ್ಗೆ ಗಂಭೀರ ಕಳವಳವನು ವ್ಯಕ್ತಪಡಿಸಿದರು.
5-6 ರೂ.ಗೆ ಸಿಗುವ ಬ್ರಾಂಡ್‌ರಹಿತ ಜೆನರಿಕ್ ಔಷಧಿಯನ್ನು ದೇಶೀಯ ಔಷಧಿ ಕಂಪನಿಗಳು 250 ರೂ.ಗೆ ಮಾರಿದರೆ ,ಬಹುರಾಷ್ಟ್ರೀಯ ಕಂಪನಿಗಳು 2,500 ರೂ.ಗೆ ಮಾರಾಟ ಮಾಡುತ್ತಿವೆ. ಜೆನರಿಕ್ ಮತ್ತು ಬ್ರಾಂಡೆಡ್ ಔಷಧಿಗಳು ಒಂದೇ ಬಗೆಯ ಉತ್ಪನ್ನಗಳಾಗಿದ್ದು, ಪ್ಯಾಕಿಂಗ್ ಹೊರತು ಪಡಿಸಿದರೆ ಗುಣಮಟ್ಟದಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ. ತಾನು ತಮಾಷೆ ಮಾಡುತ್ತಿಲ್ಲ. ಕಂಪನಿ,ಬ್ರಾಂಡ್ ಮತ್ತು ಔಷಧಿಯ ಹೆಸರನ್ನೂ ತಾನು ಹೇಳಬಲ್ಲೆ ಎಂದರು.
ಜನೌಷಧಿ ಕೇಂದ್ರಗಳನ್ನು ತೆರೆಯಲು ಮುಂದೆ ಬರುವಂತೆ ಅವ1ರು ಯುವಜನರಿಗೆ ಕರೆ ನೀಡಿದರು.