ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್ ಡಬಲ್ ರೋಲ್ !
ಲಕ್ನೋ, ಫೆ.11: ಉತ್ತರ ಪ್ರದೇಶದಲ್ಲಿ ಬಿಜೆಪಿಯ ಸ್ಟಾರ್ ಪ್ರಚಾರಕ ಹಾಗೂ ಸಂಸದ ಯೋಗಿ ಆದಿತ್ಯನಾಥ್ ಪಕ್ಷದ ಗೆಲುವಿಗಾಗಿ ಶ್ರಮಿಸುತ್ತಿದ್ದರೆ, ಅತ್ತ ಅವರ ಬೆಂಬಲಿಗರು ಪಕ್ಷವನ್ನು ರಾಜ್ಯದ ಈಶಾನ್ಯ ಭಾಗಗಳಲ್ಲಿ ಸೋಲಿಸಲು ಅಹೋರಾತ್ರಿ ಶ್ರಮಿಸುತ್ತಿದ್ದಾರೆ!.
ಯೋಗಿ ಆದಿತ್ಯನಾಥ್ ಅವರೇ 2002ರಲ್ಲಿ ಸ್ಥಾಪಿಸಿದ ಯುವ ವಾಹಿನಿ ಪೂರ್ವ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಸಡ್ಡು ಹೊಡೆದು 64 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ತಮ್ಮ ನಾಯಕನನ್ನು ನಿರ್ಲಕ್ಷಿಸಲಾಗಿದೆ ಹಾಗೂ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಲಾಗಿಲ್ಲ ಎಂಬ ಕಾರಣ ನೀಡಿ ಯುವ ವಾಹಿನಿ ಪಕ್ಷದ ವಿರುದ್ಧವೇ ಸಮರ ಸಾರಿದೆ.
ಗೋರಖ್ ಪುರದ ಸಂಸದರಾಗಿರುವ ಯೋಗಿ ಆದಿತ್ಯನಾಥ್ ಹಾಗೇನೂ ಇಲ್ಲವೆಂದು ಹೇಳಿದ್ದರೂ ಅವರ ಖಾಸಗಿ ಸೇನೆಯ ಉಚ್ಚಾಟಿತ ನಾಯಕರಿಗೆ ಅವರ ಆಶೀರ್ವಾದ ಇದೆಯೆಂದೇ ನಂಬಲಾಗಿದೆ.
ಫೆಬ್ರವರಿ 8ರಂದು ಯೋಗಿ ಆದಿತ್ಯನಾಥ್ ಅವರು ಗೋರಖ್ ಪುರದಲ್ಲಿ ಗೋರಖ್ ನಾಥ ಮಠವು ನಡೆಸುವ ಹಲವು ಸಂಸ್ಥೆಗಳಲ್ಲಿ ಒಂದಾಗಿರುವ ದಿಗ್ವಿಜಯ್ ನಾಥ್ ಕಾಲೇಜಿನಲ್ಲಿ ನೂರಾರು ವಾಹಿನಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದರು. ಆದರೆ ಈ ಸಭೆಯನ್ನು ರಾಜ್ಯ ಯುವ ವಾಹಿನಿ ಅಧ್ಯಕ್ಷ ಸುನೀಲ್ ಸಿಂಗ್ ಹಾಗೂ ಪ್ರಧಾನ ಕಾರ್ಯದರ್ಶಿ ರಾಮ ಲಕ್ಷ್ಮಣ್ ನೇತೃತ್ವದ ಭಿನ್ನಮತೀಯರ ಗುಂಪು ಬಹಿಷ್ಕರಿಸಿದೆ. ‘‘ಅವರಿಗೂ (ಸುನೀಲ್ ಸಿಂಗ್) ಹಾಗೂ ನಮಗೂ ಯಾವುದೇ ಸಂಬಂಧವಿಲ್ಲ. ಅವರನ್ನು ಕಸದಂತೆ ಎಸೆದು ಬಿಟ್ಟಿದ್ದೇವೆ’’ ಎಂದು ಸಭೆಯ ಮೊದಲು ಗೋರಖನಾಥ್ ಮಠದ ಮುಖ್ಯ ಅರ್ಚಕ ಯೋಗಿ ಹೇಳಿದ್ದರು.
ಜನವರಿ 7ರಂದು ವಾಹಿನಿ ತನ್ನ ಆರು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದಾಗ ಭಿನ್ನಮತ ಬೆಳಕಿಗೆ ಬಂದಿತ್ತು. ಎರಡು ದಿನಗಳ ನಂತರ ಸುನೀಲ್ ಹಾಗೂ ಲಕ್ಷ್ಮಣ್ ಅವರನ್ನು ಉಚ್ಚಾಟಿಸಲಾಗಿತ್ತು. ಇಲ್ಲಿಯ ತನಕ ವಾಹಿನಿ ತನ್ನ 24 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, 25 ಕ್ಷೇತ್ರಗಳಲ್ಲಿ ಶಿವಸೇನೆಯೊಂದಿಗೆ ಮೈತ್ರಿ ಸಾಧಿಸಲಾಗಿದೆ ಎಂದು ಹೇಳಿಕೊಂಡಿದೆ.
ತಮ್ಮ ಉಚ್ಚಾಟನೆ ಅಸಂವಿಧಾನಿಕ ಎಂದು ಹೇಳಿರುವ ಸುನೀಲ್, ಪಕ್ಷವು ಯೋಗಿಯ ಮುಖಾಂತರ ಇದನ್ನೆಲ್ಲಾ ಸಾಧಿಸುತ್ತಿದೆ ಎಂದು ಹೇಳಿಕೊಂಡಿದೆ.
ಯುವ ವಾಹಿನಿ ರಾಜಕೀಯ ಸಂಘಟನೆಯಾಗಿಲ್ಲದೇ ಇದ್ದರೂ ಸಾಮಾನ್ಯ ವಿದ್ಯಾರ್ಥಿ ನಾಯಕನಿಂದ ಯೋಗಿ ಆದಿತ್ಯನಾಥ್ ಐದು ಬಾರಿ ಸಂಸದರಾಗಿರುವ ಹಿಂದೆ ಅದರ ಪಾತ್ರ ಉಲ್ಲೇಖನೀಯ. ಯೋಗಿಯವರ ವಿಜಯದ ಅಂತರ 1999 ಚುನಾವಣೆಯಲ್ಲಿ 7,000 ಮತಗಳು ಆಗಿದ್ದವು. ಆದರೆ ಈ ಅಂತರ 2004ರಲ್ಲಿ 1.42 ಲಕ್ಷಕ್ಕೇರಿದ್ದರೆ, 2014ರಲ್ಲಿ 3 ಲಕ್ಷಕ್ಕೇರಿತ್ತು.