ಹೆಲಿಕಾಪ್ಟರ್ ತಪಾಸಣೆ:ಚು.ಆಯೋಗಕ್ಕೆ ಉತ್ತರಾಖಂಡ್ ಸಿಎಂ ರಾವತ್ ದೂರು
ಡೆಹ್ರಾಡೂನ್,ಫೆ.11: ಹಲ್ದ್ವಾನಿ ಪ್ರದೇಶದಲ್ಲಿ ಚುನಾವಣಾ ಪ್ರಚಾರದ ಸಂದರ್ಭ ಅಕ್ರಮ ಹಣಕ್ಕಾಗಿ ತನ್ನ ಹೆಲಿಕಾಪ್ಟರ್‌ನ ತಪಾಸಣೆಯನ್ನು ಶನಿವಾರ ತೀವ್ರವಾಗಿ ಆಕ್ಷೇಪಿಸಿದ ಉತ್ತರಾಖಂಡ್ ಮುಖ್ಯಮಂತ್ರಿ ಹರೀಶ ರಾವತ್ ಅವರು, ಕೇಂದ್ರದ ಸೂಚನೆಯಂತೆ ತನಗೆ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದರು.
ಪಕ್ಷದ ಅಭ್ಯರ್ಥಿಗಳಿಗೆ ಹಂಚಲು ಬಿಜೆಪಿ ನಾಯಕರು ದಿಲ್ಲಿಯಿಂದ ಹೆಲಿಕಾಪ್ಟರ್‌ಗಳಲ್ಲಿ ನೋಟುಗಳ ಕಂತೆಗಳನ್ನೇ ತರುತ್ತಿದ್ದಾರೆ. ಹೀಗಿರುವಾಗ ತನ್ನ ಹೆಲಿಕಾಪ್ಟರ್‌ನ್ನು ಮಾತ್ರ ಏಕೆ ತಪಾಸಣೆ ಮಾಡಲಾಗುತ್ತಿದೆ ಎಂದು ರಾವತ್ ಮುಖ್ಯ ಚುನಾವಣಾ ಆಯುಕ್ತರಿಗೆ ಸಲ್ಲಿಸಿರುವ ದೂರಿನಲ್ಲಿ ಪ್ರಶ್ನಿಸಿದ್ದಾರೆ.
ಬಿಜೆಪಿಯ ಕೇಂದ್ರೀಯ ನಾಯಕರಿಗೆ ಆಯೋಗದಿಂದ ‘ವಿಶೇಷ ಉಪಚಾರ ’ದೊರೆಯುತ್ತಿರುವುದನ್ನು ಆಕ್ಷೇಪಿಸಿರುವ ಅವರು, ದಿಲ್ಲಿಯಲ್ಲಿರುವ ತನ್ನ ಪ್ರಭಾವಿ ರಾಜಕೀಯ ವಿರೋಧಿಗಳ ಒತ್ತಾಸೆಯ ಮೇರೆಗೆ ತನಗೆ ಕಿರುಕುಳ ನೀಡಲಾಗುತ್ತಿದೆ ಎಂದು ಆಪಾದಿಸಿದ್ದಾರೆ.
ಶನಿವರ ಹಲ್ದ್ವಾನಿಯಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳು ರಾವತ್ ಅವರ ಹೆಲಿಕಾಪ್ಟರ್‌ನಲ್ಲಿ ಅಕ್ರಮ ಹಣದ ಪತ್ತೆಗಾಗಿ ತಪಾಸಣೆ ನಡೆಸಿದ್ದರು.
ಬಿಜೆಪಿಯು ಈವರೆಗೆ ರಾಜ್ಯದಲ್ಲಿ ಚುನಾವಣೆಗಾಗಿ 2,000 ಕೋ.ರೂ.ಸುರಿದಿದೆ ಎಂದು ಆಪಾದಿಸಿದ ರಾವತ್, ಎಷ್ಟೇ ಪ್ರಮುಖ ನಾಯಕರಾಗಿರಲಿ...ಚುನಾವಣಾ ಆಯೋಗವು ಎಲ್ಲರನ್ನೂ ಸಮಾನವಾಗಿ ನಡೆಸಿಕೊಳ್ಳಬೇಕು ಎಂದು ಪ್ರತಿಪಾದಿಸಿದರು.