×
Ad

ನ್ಯೂಝಿಲ್ಯಾಂಡ್: ತಿಮಿಂಗಿಲಗಳನ್ನು ದೂರ ಅಟ್ಟಲು ಮಾನವ ಸರಪಣಿ

Update: 2017-02-11 20:23 IST

ವೆಲಿಂಗ್ಟನ್, ಫೆ. 11: ನೂರಾರು ಸಂಖ್ಯೆಯಲ್ಲಿ ಸಮುದ್ರ ತೀರಕ್ಕೆ ಬಂದು ಸಿಕ್ಕಿಹಾಕಿಕೊಂಡಿರುವ ತಿಮಿಂಗಿಲಗಳನ್ನು ರಕ್ಷಿಸಲು ನ್ಯೂಝಿಲ್ಯಾಂಡ್‌ನ ರಕ್ಷಣಾ ಕಾರ್ಯಕರ್ತರು ತಮಗೆ ತಿಳಿದಿರುವ ಎಲ್ಲ ತಂತ್ರಗಳನ್ನು ಬಳಸುತ್ತಿದ್ದಾರೆ.

ಸುಮಾರು 200 ಪೈಲಟ್ ತಿಮಿಂಗಿಲಗಳು ಮತ್ತೆ ತೀರಕ್ಕೆ ಬರದಂತೆ ತಡೆಯುವುದಕ್ಕಾಗಿ ಕಾರ್ಯಕರ್ತರು ಶನಿವಾರ ಕುತ್ತಿಗೆವರೆಗಿನ ಆಳದ ನೀರಿನಲ್ಲಿ ಮಾನವ ಸರಪಳಿಯನ್ನು ನಡೆಸಿದರು.ಇಲ್ಲಿ ಈಗಾಗಲೇ ಸುಮಾರು 300 ತಿಮಿಂಗಿಲಗಳು ಈ ವಾರ ಸಾವನ್ನಪ್ಪಿವೆ.

ನ್ಯೂಝಿಲ್ಯಾಂಡ್‌ನ ಸೌತ್ ಐಲ್ಯಾಂಡ್‌ನ ತುದಿಯಲ್ಲಿರುವ ಗೋಲ್ಡನ್ ಬೇ ಸಮುದ್ರ ತೀರದ ಆಳವಿರದ ನೀರಿನಲ್ಲಿ ತಿಮಿಂಗಿಲಗಳು ಬಂದು ಸೇರಿಕೊಂಡಿವೆ.

ನ್ಯೂಝಿಲ್ಯಾಂಡ್‌ನಲ್ಲಿ ಇಷ್ಟೊಂದು ಪ್ರಮಾಣದಲ್ಲಿ ತಿಮಿಂಗಿಲಗಳು ಸಮುದ್ರ ತೀರಕ್ಕೆ ಬಂದು ಸಿಕ್ಕಿಹಾಕಿಕೊಂಡಿರುವುದು 1985ರ ಬಳಿಕ ಇದೇ ಮೊದಲ ಬಾರಿಯಾಗಿದೆ. 1985ರಲ್ಲಿ ಆಕ್ಲಂಡ್‌ನಲ್ಲಿ 450 ತಿಮಿಂಗಿಲಗಳು ಸಮುದ್ರ ತೀರಕ್ಕೆ ಬಂದಿದ್ದವು.

ಸುಮಾರು 100 ರಕ್ಷಣಾ ಸ್ವಯಂಸೇವಕರ ಗುಂಪೊಂದು ಮೂರು ದೋಣಿಗಳ ಸಹಾಯದಿಂದ ತಿಮಿಂಗಿಲಗಳು ತೀರಕ್ಕೆ ಬರದಂತೆ ತಡೆಯುತ್ತಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

‘‘ಈ ತಿಮಿಂಗಿಲಗಳು ಉತ್ತಮ ಸ್ಥಿತಿಯಲ್ಲಿಲ್ಲ. ಯಾತನೆಯಿಂದ ಮುಕ್ತಿ ನೀಡಲು ಅವುಗಳಿಗೆ ದಯಾಮರಣ ನೀಡಲಾಗುವುದು’’ ಎಂದು ಅರಣ್ಯ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.

ಆಳವಿಲ್ಲದ ಬೀಚ್‌ನಲ್ಲಿ ದಿಕ್ಕು ತಪ್ಪಿರಬಹುದು

ಗೋಲ್ಡನ್ ಬೇ ಸಮುದ್ರ ತೀರಕ್ಕೆ ತಿಮಿಂಗಿಲಗಳು ಬಂದು ಸಿಕ್ಕಿಹಾಕಿಕೊಳ್ಳುವುದು ಅಪರೂಪವೇನಲ್ಲ. ಆದಾಗ್ಯೂ, ಇದಕ್ಕೆ ನಿಖರ ಕಾರಣ ತಿಳಿದಿಲ್ಲ.

ಈ ಬೀಚ್‌ನ ಅತ್ಯಂತ ಕಡಿಮೆ ಮಟ್ಟದ ನೀರು ತಿಮಿಂಗಿಲಗಳ ಸೋನಾರ್ ವ್ಯವಸ್ಥೆಯನ್ನು ಗೊಂದಲಕ್ಕೀಡುಮಾಡುತ್ತಿರಬಹುದು, ಹಾಗಾಗಿ, ಸಮುದ್ರದ ಇಳಿತದ ಸಮಯದಲ್ಲಿ ಅವುಗಳು ಸಿಕ್ಕಿಹಾಕಿಕೊಳ್ಳುತ್ತಿರಬಹುದು ಎಂದು ಪರಿಣತರು ಹೇಳುತ್ತಾರೆ.

ಪೈಲಟ್ ತಿಮಿಂಗಿಲಗಳು ಅಪಾಯದಂಚಿನಲ್ಲಿರುವ ಪ್ರಾಣಿಗಳ ಪಟ್ಟಿಗೆ ಸೇರ್ಪಡೆಯಾಗಿಲ್ಲ. ಆದರೆ, ನ್ಯೂಝಿಲ್ಯಾಂಡ್ ಸಮುದ್ರದಲ್ಲಿ ಅವುಗಳು ಎಷ್ಟು ಸಂಖ್ಯೆಯಲ್ಲಿರಬಹುದು ಎಂಬ ಬಗ್ಗೆ ಯಾವುದೇ ಮಾಹಿತಿಯಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News