×
Ad

ದಲಿತರ ಹಕ್ಕುಗಳಿಗಾಗಿ ಹೋರಾಡುವುದು ರಾಷ್ಟ್ರವಿರೋಧಿ ಕೃತ್ಯವೇ ? : ಗುಜರಾತ್‌ನಲ್ಲಿ ದಲಿತ ಪ್ರತಿಭಟನಾಕಾರರ ಪ್ರಶ್ನೆ

Update: 2017-02-11 20:24 IST

ಹೊಸದಿಲ್ಲಿ, ಫೆ.11: ಗುಜರಾತ್‌ನ ಪ್ರಮುಖ ದಲಿತ ಸಂಘಟನೆಗಳಲ್ಲಿ ಒಂದೆನಿಸಿರುವ ‘ನವ್‌ಸರ್ಜನ್ ಟ್ರಸ್’್ಟನ ವಿದೇಶಿ ದೇಣಿಗೆ ಸ್ವೀಕರಿಸುವ ಪರವಾನಗಿ ಅಥವಾ ಎಫ್‌ಸಿಆರ್‌ಎ ರದ್ದುಪಡಿಸುವ ಕೇಂದ್ರ ಗೃಹ ಸಚಿವಾಲಯದ ನಿರ್ಧಾರವನ್ನು ವಿರೋಧಿಸಿ ದಲಿತ ಸಮುದಾಯದ ಸದಸ್ಯರು ಫೆ.14ರಂದು ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.

ಊನಾದಲ್ಲಿ ತಥಾಕಥಿತ ಗೋರಕ್ಷಕರು ಏಳು ಮಂದಿ ದಲಿತರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಘಟನೆಯನ್ನು ಖಂಡಿಸಿ ಕಳೆದ ಜುಲೈಯಲ್ಲಿ ನಡೆದ ದಲಿತರ ಪ್ರತಿಭಟನೆಯಲ್ಲಿ ನವ್‌ಸರ್ಜನ್ ಟ್ರಸ್ಟ್ ಪಾಲ್ಗೊಂಡಿತ್ತು. ಇದಾದ ಕೆಲವೇ ತಿಂಗಳಿನಲ್ಲಿ ಈ ಟ್ರಸ್ಟ್‌ಗೆ ನೀಡಲಾಗಿದ್ದ ವಿದೇಶಿ ದೇಣಿಗೆ ಸ್ವೀಕರಿಸುವ ಪರವಾನಗಿಯನ್ನು ರದ್ದುಪಡಿಸಲಾಗಿದೆ.

ಸಂಸ್ಥೆಗೆ ನೀಡಲಾಗಿದ್ದ ಎಫ್‌ಸಿಆರ್‌ಎ (ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ) ಲೈಸೆನ್ಸ್ ಅನ್ನು ಮೊದಲು ನವೀಕರಿಸಿದ್ದ ಸರಕಾರ ಬಳಿಕ ಹಠಾತ್ತನೆ ರದ್ದುಗೊಳಿಸಿತ್ತು. ನವ್‌ಸರ್ಜನ್  ಟ್ರಸ್ಟ್ ಅನಪೇಕ್ಷಿತ ಕೃತ್ಯಗಳಲ್ಲಿ ತೊಡಗಿರುವುದು ಗಮನಕ್ಕೆ ಬಂದಿದೆ. ಈ ಕೃತ್ಯವು ಧರ್ಮ, ಜನಾಂಗ, ಸಾಮಾಜಿಕ, ಭಾಷಾಧಾರಿತ ಸಾಮರಸ್ಯವನ್ನು ಕೆಡಿಸುವ ಉದ್ದೇಶ ಹೊಂದಿರುವ ಕಾರಣ ಈ ಟ್ರಸ್ಟ್‌ಗೆ ನೀಡಲಾಗಿದ್ದ ಎಫ್‌ಸಿಆರ್‌ಎ ರದ್ದುಗೊಳಿಸಲಾಗಿದೆ ಎಂದು ಕಾರಣ ನೀಡಲಾಗಿದೆ.

ಇದರಿಂದ ನವ್‌ಸರ್ಜನ್‌ನ ಕಾರ್ಯ ಚಟುವಟಿಕೆಗೆ ತಡೆ ಉಂಟಾಗಿದೆ.ಟ್ರಸ್ಟ್‌ನಲ್ಲಿ ಕಳೆದ 15 ವರ್ಷಗಳಿಂದಲೂ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನು ಕೆಲಸದಿಂದ ತೆಗೆಯುವ ಅನಿವಾರ್ಯತೆ ಎದುರಾಗಿದೆ. ಅಲ್ಲದೆ ಇತರ ಶಾಲೆಗಳಿಂದ ಬಹಿಷ್ಕರಿಸಲ್ಪಟ್ಟಿರುವ ದಲಿತ ಮಕ್ಕಳಿಗಾಗಿ ಆರಂಭಿಸಲಾಗಿರುವ ಮೂರು ಶಾಲೆಗಳನ್ನು ಮುಚ್ಚುವಂತಾಗಿದೆ. ಅಲ್ಲದೆ ದಲಿತ ಯುವಕರಿಗಾಗಿ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡುವ ತರಬೇತಿ ಕೇಂದ್ರಗಳೂ ಬಾಗಿಲು ಮುಚ್ಚುವಂತಾಗಿದೆ.

 ಕಳೆದ ಎರಡು ವರ್ಷದಲ್ಲಿ ದೇಶದಲ್ಲಿ ಮಾನವ ಹಕ್ಕುಗಳಿಗಾಗಿ ಹೋರಾಡುವ, ಆರೋಗ್ಯ, ಪರಿಸರ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವ ಸುಮಾರು 20 ಸಾವಿರ ಸರ್ಕಾರೇತರ ಸಂಸ್ಥೆಗಳು(ವಿದೇಶದಿಂದ ದೇಣಿಗೆ ಸ್ವೀಕರಿಸುವ) ರದ್ದಾಗಿವೆ ಅಥವಾ ಇವು ತಮ್ಮ ಪರವಾನಗಿಯನ್ನು ನವೀಕರಿಸಿಲ್ಲ.

ನವ್‌ಸರ್ಜನ ಟ್ರಸ್ಟ್‌ನಿಂದ ಅಪಾಯ ಸಂಭವಿಸಬಹುದು ಎಂದು ಭಾವಿಸಿರುವ ಗುಜರಾತ್‌ನಲ್ಲಿ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಈ ಟ್ರಸ್ಟ್ ಅನ್ನೇ ಗುರಿಯಾಗಿಸಿಕೊಂಡಿದೆ ಎಂಬುದು ಟ್ರಸ್ಟ್‌ನ ಸ್ಥಾಪಕ ಮಾರ್ಟಿನ್ ಮೆವಾನ್ ಅವರ ಹೇಳಿಕೆ. ಟ್ರಸ್ಟ್‌ನ ಕಾರ್ಯಚಟುವಟಿಕೆಗೆ ದೇಶ್ರೋಹದ ಲೇಬಲ್ ಅಂಟಿಸಿರುವ ಕ್ರಮದಿಂ ದ ಇಲ್ಲಿನ ದಲಿತ ಸಮುದಾಯ ಗೊಂದಲಕ್ಕೆ ಒಳಗಾಗಿದೆ ಎನ್ನುವ ಅವರು, ಜಾತಿಯ ಹೆಸರಲ್ಲಿ ನಡೆಯುತ್ತಿರುವ ದೌರ್ಜನ್ಯವನ್ನು ವಿರೋಧಿಸುವುದು ರಾಷ್ಟ್ರವಿರೋಧಿ ಕೃತ್ಯ ಎಂದಾದಲ್ಲಿ ನಾವು ಇಂತಹ ‘ರಾಷ್ಟ್ರವಿರೋಧಿ’ ಕೃತ್ಯವನ್ನು ಜೀವನವಿಡೀ ನಡೆಸಲು ಸಿದ್ಧರಿದ್ದೇವೆ ಎಂದು ಘೋಷಿಸಿದರು.

ನಮ್ಮ ಸಾಂಪ್ರದಾಯಿಕ ವೃತ್ತಿ ನಿರ್ವಹಿಸುವಾಗ ನಾವು ಪ್ರತೀದಿನ ಹಿಂಸೆಗೆ ಒಳಗಾಗುತ್ತೇವೆ. ನಮ್ಮ ರಕ್ಷಣೆಗಾಗಿ ಬಂದವರ (ನವ್‌ಸರ್ಜನ್) ಗತಿ ಏನಾಗಿದೆ ನೋಡಿ. ಆದ್ದರಿಂದ ನಾನು ಕುಟುಂಬದ ಸದಸ್ಯರೊಂದಿಗೆ ಫೆ.14ರಂದು ನಡೆಯುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಲಾಲ್‌ಜಿ ಚಾವ್ಡಾ ಎಂಬವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News