×
Ad

ವಲಸಿಗರನ್ನು ನಿಷೇಧಿಸಲು ನೂತನ ಆದೇಶ :ಟ್ರಂಪ್ ಇಂಗಿತ

Update: 2017-02-11 20:29 IST

ವಾಶಿಂಗ್ಟನ್, ಫೆ. 11: ಮುಸ್ಲಿಮ್ ಬಾಹುಳ್ಯದ ದೇಶಗಳ ನಿವಾಸಿಗಳಿಗೆ ಅಮೆರಿಕ ಪ್ರವೇಶವನ್ನು ನಿಷೇಧಿಸುವ ತನ್ನ ಮೊದಲ ಆದೇಶ ನ್ಯಾಯಾಲಯದ ಅವಕೃಪೆಗೆ ಗುರಿಯಾಗಿರುವ ಹಿನ್ನೆಲೆಯಲ್ಲಿ, ನೂತನ ಆದೇಶವೊಂದನ್ನು ಸಿದ್ಧಪಡಿಸುವ ಬಗ್ಗೆ ಪರಿಶೀಲಿಸುತ್ತಿದ್ದೇನೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಹೇಳಿದ್ದಾರೆ.

ಫೆಡರಲ್ ನ್ಯಾಯಾಲಯದಲ್ಲಿ ಎರಡು ಬಾರಿ ಸೋಲು ಅನುಭವಿಸಿದ ಹೊರತಾಗಿಯೂ ಕಾನೂನು ತನ್ನ ಪರವಾಗಿದೆ ಎಂದು ಹೇಳಿಕೊಂಡ ಟ್ರಂಪ್, ಭದ್ರತಾ ಬೆದರಿಕೆಯ ಹಿನ್ನೆಲೆಯಲ್ಲಿ ಕಾನೂನು ವ್ಯವಸ್ಥೆಯು ಅನುಮತಿ ನೀಡುವ ಮೊದಲೇ ಕ್ಷಿಪ್ರವಾಗಿ ಕ್ರಮ ತೆಗೆದುಕೊಳ್ಳಬೇಕಾದ ಅಗತ್ಯವಿದೆ ಎಂದು ಹೇಳಿದರು.

‘‘ಕಾನೂನುಬದ್ಧವಾಗಿ ಹೋದರೆ ಸಮಯ ತೆಗೆದುಕೊಳ್ಳುತ್ತದೆ, ಆದರೆ, ನಾವು ಹೋರಾಟದಲ್ಲಿ ಜಯ ಗಳಿಸುವುದು ಖಂಡಿತ. ಅದೂ ಅಲ್ಲದೆ, ನಮ್ಮಲ್ಲಿ ಇತರ ಹಲವಾರು ಆಯ್ಕೆಗಳೂ ಇವೆ. ಹೊಸ ಆದೇಶವೊಂದನ್ನು ಹೊರಡಿಸುವುದು ಅವುಗಳ ಪೈಕಿ ಒಂದು’’ ಎಂದರು.ಆದಾಗ್ಯೂ, ಮುಂದಿನ ವಾರಕ್ಕಿಂತ ಮೊದಲು ಯಾವುದೇ ಕ್ರಮ ತೆಗೆದುಕೊಳ್ಳಲಾಗುವುದಿಲ್ಲ ಎಂದು ಟ್ರಂಪ್ ನುಡಿದರು.

ನೂತನ ಕರಡು ರಚನೆ ನಿಮ್ಮ ಯೋಜನೆಯ ಭಾಗವಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅಮೆರಿಕದ ಅಧ್ಯಕ್ಷರು, ‘‘ಭದ್ರತಾ ಕಾರಣಗಳ ಹಿನ್ನೆಲೆಯಲ್ಲಿ ನಾವು ವೇಗವಾಗಿ ಕಾರ್ಯಾಚರಿಸಬೇಕಾಗಿದೆ. ಹಾಗಾಗಿ, ಅದೇ ಆಗಬಹುದಾಗಿದೆ’’ ಎಂದರು.

ಪ್ರವಾಸಿ ಜಪಾನ್ ಪ್ರಧಾನಿ ಶಿಂರೊ ಅಬೆ ಜೊತೆಗೆ ಶುಕ್ರವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್, ‘‘ದೇಶಕ್ಕೆ ಎದುರಾಗಿರುವ ಅಗಾಧ ಬೆದರಿಕೆಗಳ ಬಗ್ಗೆ ಅಧ್ಯಕ್ಷನ ನೆಲೆಯಲ್ಲಿ ನಾನು ತಿಳಿದುಕೊಂಡಿದ್ದೇನೆ’’ ಎಂದರು.

ನೋಂದಣಿಯಾಗದ ನೂರಾರು ವಲಸಿಗರ ಬಂಧನ

ಈ ವಾರ ಅಮೆರಿಕದ ಕನಿಷ್ಠ ನಾಲ್ಕು ರಾಜ್ಯಗಳಲ್ಲಿ ನೋಂದಣಿಯಾಗದ ನೂರಾರು ವಲಸಿಗರನ್ನು ಫೆಡರಲ್ ವಲಸೆ ಅಧಿಕಾರಿಗಳು ಬಂಧಿಸಿದ್ದಾರೆ.
ವಲಸೆ ಅಧಿಕಾರಿಗಳು ಅಟ್ಲಾಂಟ, ನ್ಯೂಯಾಕ್, ಶಿಕಾಗೊ, ಲಾಸ್ ಏಂಜಲಿಸ್ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಅಮೆರಿಕ ವಲಸೆ ಮತ್ತು ಸುಂಕ ಇಲಾಖೆಯ ಲಾಸ್ ಏಂಜಲಿಸ್ ಕ್ಷೇತ್ರ ಕಚೇರಿಯ ನಿರ್ದೇಶಕ ಡೇವಿಡ್ ಮ್ಯಾರಿನ್ ತಿಳಿಸಿದರು.

ಬಂಧಿತರ ಒಟ್ಟು ಸಂಖ್ಯೆಯನ್ನು ಇಲಾಖೆ ಬಿಡುಗಡೆ ಮಾಡಿಲ್ಲ. ಮೂರು ರಾಜ್ಯಗಳ ವ್ಯಾಪ್ತಿ ಹೊಂದಿರುವ ಅಟ್ಲಾಂಟ ಕಚೇರಿ 200 ಮಂದಿಯನ್ನು ಬಂಧಿಸಿದೆ ಎಂದು ಕಚೇರಿಯ ವಕ್ತಾರರೊಬ್ಬರು ತಿಳಿಸಿದರು.

ಅದೇ ವೇಳೆ, ಲಾಸ್ ಏಂಜಲಿಸ್ ಪ್ರದೇಶದಲ್ಲಿ 161 ಮಂದಿಯನ್ನು ಬಂಧಿಸಲಾಗಿದೆ.ಫೆಡರಲ್ ಅಧಿಕಾರಿಗಳ ಈ ಕಾರ್ಯಾಚರಣೆಯು ವಲಸಿಗರ ಬೆನ್ನುಹುರಿಯಲ್ಲಿ ಚಳಿ ಹುಟ್ಟಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News