ಶಿವಸೇನೆ ಸಚಿವರ ರಾಜೀನಾಮೆ ಬೆದರಿಕೆ ರಾಜಕೀಯ ತಂತ್ರ ಮಹಾರಾಷ್ಟ್ರ ಸರಕಾರ ಸುಭದ್ರ : ದೇವೇಂದ್ರ ಫಡ್ನವೀಸ್

Update: 2017-02-11 16:00 GMT

ಮುಂಬೈ, ಫೆ.11: ಮಹತ್ವದ ಮುಂಬೈ ನಗರಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ಮೈತ್ರಿಕೂಟದ ಸಹಪಕ್ಷ ಶಿವಸೇನೆಯ ಸಚಿವರು ರಾಜೀನಾಮೆ ಬೆದರಿಕೆ ಒಡ್ಡಿದ್ದರೂ, ತನ್ನ ಸರಕಾರ ಸುಭದ್ರವಾಗಿದೆ. ಪೂರ್ಣಾವಧಿ ಪೂರೈಸಲಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತಿಳಿಸಿದ್ದಾರೆ.

ಹಿಂದೂಸ್ತಾನ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ತನ್ನ ಅಭಿಪ್ರಾಯ ತಿಳಿಸಿದ ಮುಖ್ಯಮಂತ್ರಿ ಫಡ್ನವೀಸ್, ಪ್ರಸ್ತುತ ಶಿವಸೇನೆಯು ನಮ್ಮಿಡನೆ ಸರಕಾರದಲ್ಲಿದೆ. ಅವರು ಬೆಂಬಲ ಹಿಂಪಡೆದಿಲ್ಲ ಮತ್ತು ಸರಕಾರ ಸುಭದ್ರವಾಗಿದೆ. ಅವರು ಬೆಂಬಲ ವಾಪಾಸು ಪಡೆದರೆ ಎಂಬ ಪ್ರಶ್ನೆಗೆ ನಾನು ಉತ್ತರಿಸಲಾರೆ. ಆದರೆ ಒಂದಂತೂ ಸತ್ಯ. ಈ ಸರಕಾರ ಪೂರ್ಣಾವಧಿ ಬಾಳಲಿದೆ ಎಂದರು.

ಶಿವಸೇನೆಯ ಬೆಂಬಲವಿಲ್ಲದೆಯೂ ಸರಕಾರ ಬಹುಮತ ಪಡೆಯಬಲ್ಲದು ಎಂಬುದು ಫಡ್ನವೀಸ್ ಅವರ ಹೇಳಿಕೆಯ ಗೂಡಾರ್ಥ ಎಂದು ವಿಶ್ಲೇಷಿಸಲಾಗಿದೆ. ನಗರಪಾಲಿಕೆ ಚುನಾವಣೆಯ ಪ್ರಚಾರ ಕಾರ್ಯದ ಅಂತಿಮ ದಿನವಾದ ಫೆ.18ರಂದು ಸರಕಾರಕ್ಕೆ ಶಿವಸೇನೆಯ ಸಚಿವರು ರಾಜೀನಾಮೆ ನೀಡುವರು ಎಂಬ ಬೆದರಿಕೆಯನ್ನೂ ಫಡ್ನವೀಸ್ ಗಂಭೀರವಾಗಿ ಪರಿಗಣಿಸಿಲ್ಲ ಎಂಬುದನ್ನು ಇಲ್ಲಿ ಉಲ್ಲೇಖಿಸಬಹುದು.

  ಶಿವಸೇನೆಯ ಸಚಿವರು ಮುಂದಿನ ವಾರ ತಮ್ಮ ರಾಜೀನಾಮೆ ಪತ್ರವನ್ನು ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆಗೆ ಹಸ್ತಾಂತರಿಸಲಿದ್ದಾರೆ ಎಂಬ ವರದಿಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಜೀನಾಮೆ ಪತ್ರ ಸಲ್ಲಿಸಲಿದ್ದಾರೆ ಎಂಬ ಹೇಳಿಕೆಯ ಹಿಂದೆ ಕೆಲವೊಮ್ಮೆ ರಾಜಕೀಯ ತಂತ್ರಗಾರಿಕೆ ಅಡಗಿರುತ್ತದೆ. ಬೃಹತ್ ರ್ಯಾಲಿಯೊಂದರಲ್ಲಿ ಕಾರ್ಯಕರ್ತರ ಗಮನ ಬೇರೆ ವಿಷಯದತ್ತ ಸೆಳೆಯಲು ಈ ರೀತಿಯ ತಂತ್ರಗಾರಿಕೆ ನಡೆಸಲಾಗುತ್ತದೆ . ಮಾಧ್ಯಮಗಳಲ್ಲಿ ಈ ವಿಷಯ ಇಡೀ ದಿನ ಪ್ರಸಾರವಾಗುತ್ತದೆ ಎಂದವರಿಗೆ ಗೊತ್ತಿರುತ್ತದೆ ಎಂದರು.

ಒಂದು ವೇಳೆ ಶಿವಸೇನೆ ಬೆಂಬಲ ಹಿಂಪಡೆದರೆ ಶರದ್ ಯಾದವ್ ನೇತೃತ್ವದ ಎನ್‌ಸಿಪಿ ಬೆಂಬಲ ನೀಡಬಹುದೇ ಎಂಬ ಪ್ರಶ್ನೆಗೆ- ಪ್ರಸ್ತುತ ಸಂದರ್ಭದಲ್ಲಿ ಇದೊಂದು ಪರಿಕಲ್ಪಿತ ವಿಷಯ ಅಷ್ಟೇ ಎಂದರು.

  ಶಿವಸೇನೆ ಬೆಂಬಲ ಹಿಂಪಡೆಯದು. ಒಂದು ವೇಳೆ ಹಿಂಪಡೆದರೂ ಆಗ 12 ಸಚಿವರ ಹುದ್ದೆ ಕಾಲಿಯಾಗುತ್ತದೆ. ಈ ಆಮಿಷವನ್ನಿಟ್ಟುಕೊಂಡು ಶಾಸಕರ ಬೆಂಬಲ ಪಡೆಯುವುದು ಕಷ್ಟವೇನೂ ಆಗಲಿಕ್ಕಿಲ್ಲ. ಅಲ್ಲದೆ ಬಹುಮತಕ್ಕೆ ಸುಮಾರು 22 ಶಾಸಕರ ಅಗತ್ಯ ಬೀಳುತ್ತದೆ. ಯಾರಿಗೂ ಮಧ್ಯಾವಧಿ ಚುನಾವಣೆಯ ಆಸಕ್ತಿ ಇಲ್ಲದ ಕಾರಣ ಬೆಂಬಲ ಪಡೆಯಬಹುದು ಎಂಬುದು ಬಿಜೆಪಿ ಲೆಕ್ಕಾಚಾರ ಎನ್ನಲಾಗಿದೆ.

 ಅದಾಗ್ಯೂ , 63 ಸದಸ್ಯರನ್ನು ಹೊಂದಿರುವ ಶಿವಸೇನೆಯನ್ನು ಎದುರು ಹಾಕಿಕೊಳ್ಳುವುದು ಫಡ್ನವೀಸ್‌ಗೆ ಇಷ್ಟವಿಲ್ಲ ಎನ್ನಲಾಗುತ್ತಿದೆ. 2019ರ ವಿಧಾನಸಭೆ ಚುನಾವಣೆ ಸೇರಿದಂತೆ ಮುಂದಿನ ದಿನಗಳಲ್ಲಿ ಬಿಜೆಪಿಯೊಂದಿಗೆ ಯಾವುದೇ ಮೈತ್ರಿಯ ಸಂಭವವಿಲ್ಲ ಎಂದು ಶಿವಸೇನೆಯ ಮುಖ್ಯಸ್ಥರು ಘೋಷಿಸಿದ್ದರೂ, ಬಿಜೆಪಿ ಮೈತ್ರಿ ಮುಂದುವರಿಯುವ ಬಗ್ಗೆ ಆಶಾವಾದ ಹೊಂದಿದೆ. ಹಿಂದುತ್ವ ಎಂಬುದು ಎರಡೂ ಪಕ್ಷಗಳ ಸಿದ್ದಾಂತವಾಗಿರುವ ಕಾರಣ ಎರಡೂ ಪಕ್ಷಗಳು ಒಂದೇ ದೋಣಿಯ ಪಯಣಿಗರು ಎಂಬುದು ಫಡ್ನವೀಸ್ ಅಭಿಪ್ರಾಯ.

ಮುಂಬೈ ನಗರಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಸ್ವಂತ ಬಲದಲ್ಲಿ ಅಧಿಕಾರಕ್ಕೆ ಬರಲಿದೆ. ಇಲ್ಲಿ ಚುನಾವಣೋತ್ತರ ಮೈತ್ರಿಯ ಪ್ರಶ್ನೆಯೇ ಬಾರದು ಎಂದು ಫಡ್ನವೀಸ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News