ಈಗ ದೇಶದಲ್ಲಿ ಮುಸ್ಲಿಂ ಹೆಸರೇ ಭಯ ಸೃಷ್ಟಿಸುವ ಸ್ಥಿತಿ: ಕವಿ ಸಚ್ಚಿದಾನಂದನ್
ಕ್ಯಾಲಿಕಟ್, ಫೆ. 12: ಮುಸ್ಲಿಂ ಹೆಸರು ಕೂಡಾ ಅಪಾಯಕಾರಿಯಾದ ಪರಿಸ್ಥಿತಿಯತ್ತ ದೇಶ ತಲುಪಿಬಿಟ್ಟಿದೆ ಎಂದು ಕೇರಳದ ಪ್ರಮುಖ ಕವಿ ಸಚ್ಚಿದಾನಂದನ್ ಹೇಳಿದ್ದಾರೆ. ಎಲ್ಲ ಧರ್ಮದಲ್ಲಿಯೂ ಅಪರಾಧಿಗಳಿದ್ದಾರೆ. ಆದರೆ ಹಿಂದೂ ಧರ್ಮಕ್ಕೆ ಸೇರಿದ ಹತ್ತುಮಂದಿ ಮತ್ತು ಮುಸ್ಲಿಂ ಧರ್ಮಕ್ಕೆ ಸೇರಿದ ಇಬ್ಬರು ಒಂದು ಆರೋಪದಲ್ಲಿ ಬಂಧಿಸಲ್ಪಟ್ಟರೆ ಮುಸ್ಲಿಂ ಹೆಸರೆ ಮೊದಲ ಸ್ಥಾನದಲ್ಲಿ ನಿಲ್ಲುತ್ತವೆ. ಅವರ ಕುರಿತೆ ವಾರ್ತೆಗಳಿರುತ್ತವೆ ಎಂದು ಅವರು ವಾರಪತ್ರಿಕೆಯೊಂದರ ಸಂದರ್ಶನದಲ್ಲಿ ತಿಳಿಸಿದ್ದಾರೆ.
ವಿಮಾನ ನಿಲ್ದಾಣಗಳಲ್ಲಿ ಸೆಕ್ಯುರಿಟಿ ಉದ್ಯೋಗಿಗಳು ಹೆಸರನ್ನು ನೋಡುತ್ತಾರೆ. ಹೆಸರು ಸಚ್ಚಿದಾನಂದನ್ ಎಂದಿದ್ದರೆ ಅಂತಹ ದೊಡ್ಡ ತೊಂದರೆಯೇನಿಲ್ಲ ಅವರು ನಿರ್ಧರಿಸಬಿಡುತ್ತಾರೆ. ಅಬ್ದುಲ್ ಕರೀಂ ಎಂದು ಹೆಸರಿದ್ದರೆ ಎರಡೆರಡು ಬಾರಿ ತಪಾಸಣೆ ಖಚಿತ. ಹೀಗೆ ಸಾಧಾರಣವಾಗಿ ಅಧಿಕಾರ ಕೇಂದ್ರಗಳ ಎಲ್ಲ ಮಟ್ಟದಲ್ಲಿಯೂ ಇತರ ಧರ್ಮೀಯರ ಕುರಿತು ಒಂದಷ್ಟು ಹೆಚ್ಚು ಸಂದೇಹ ವ್ಯಾಪಿಸುವಂತೆ ಮಾಡಲು ಹಿಂದುತ್ವವಾದಿ ಆಶಯಕ್ಕೆ ಸಾಧ್ಯವಾಗಿದೆ. ಅದು ಬಹುಕಾಲದ ಪ್ರಯತ್ನದ ಫಲವೂ ಆಗಿದೆ ಎಂದು ಸಚ್ಚಿದಾನಂದನ್ ಅಭಿಪ್ರಾಯ ಪಟ್ಟಿದ್ದಾರೆ.
ವಸಾಹತುಶಾಹಿ ಕಾನೂನಾದ ದೇಶದ್ರೋಹ ವ್ಯಾಪಕ ದುರ್ಬಳಕೆಯಾಗುತ್ತಿದೆ. ಮಹಾತ್ಮಾಗಾಂಧಿ ಈ ಕಾನೂನಿನ ಅಡಿಯಲ್ಲಿಒಮ್ಮೆ ಬಂಧಿಸಲ್ಪಟ್ಟಿದ್ದಾಗ ಅದನ್ನು ರದ್ದು ಪಡಿಸಬೇಕೆಂದು ವಾದಿಸಿದ್ದರು. ಭಾರತದ ಪ್ರಥಮ ಪ್ರಧಾನಿ ನೆಹರೂ ಕೂಡಾ ಈ ಕಾನೂನು ವಿರುದ್ಧ ಮಾತಾಡಿದ್ದರು. ಈ ಕಾನೂನು ಅರುಂಧತಿ ರಾಯ್‌ವಿರುದ್ಧ ಹೇರಲಾಯಿತು. ಕುಡಂಕುಳದಲ್ಲಿ ಪ್ರತಿಭಟನೆ ನಡೆಸಿದ ಎಲ್ಲರ ವಿರುದ್ಧ ದೇಶದ್ರೋಹ ಕಾನೂನಿನಡಿಯಲ್ಲಿ ಕೇಸು ದಾಖಲಿಸಲಾಗಿದೆ. ರಾಷ್ಟ್ರಗೀತೆ ಸಿನೆಮಾ ಮಂದಿರಗಳಲ್ಲಿ ಕಡ್ಡಾಯಗೊಳಿಸಿದ್ದು ಇದಕ್ಕೊಂದು ಉದಾಹರಣೆಯಾಗಿದೆ. ಯಾವುದೇ ರಾಷ್ಟ್ರೀಯ ಪ್ರತೀಕಗಳನ್ನು ಕಡ್ಡಾಯಗೊಳಿಸುವಾಗ ಅದನ್ನು ಅನುಸರಿಸಬಾರದೆನ್ನುವ ಮನೋಭಾವ ಹೆಚ್ಚು ಬೆಳೆಯುತ್ತದೆ ಎಂದು ಸಚ್ಚಿದಾನಂದನ್ ಬೆಟ್ಟುಮಾಡಿ ಹೇಳಿದ್ದಾರೆಂದು ವರದಿ ತಿಳಿಸಿದೆ.