ಸ್ಥಿರ ಸರಕಾರ ಸ್ಥಾಪನೆಗೆ ಆದ್ಯತೆ : ರಾಜ್ಯಪಾಲ ಸಿ.ವಿ. ರಾವ್
ಚೆನ್ನೈ, ಫೆ.12: ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ತಕ್ಷಣ ಅವಕಾಶ ಮಾಡಿಕೊಡದಿದ್ದಲ್ಲಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಿರ್ಧರಿಸಿದ್ದಾರೆ ಎಂಬ ವರದಿ ಹಾಗೂ ಪಕ್ಷ ಹೋಳಾಗುವುದನ್ನು ತಡೆಯಲು ಪ್ರಮಾಣವಚನ ಸ್ವೀಕಾರ ಪ್ರಕ್ರಿಯೆ ತಕ್ಷಣ ನಡೆಸಬೇಕು ಎಂಬ ಸಲಹೆಯಿಂದ ರಾಜ್ಯಪಾಲರು ಭೀತರಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಸ್ಥಿರ ಸರಕಾರದ ಸ್ಥಾಪನೆ ತನ್ನ ಸಾಂವಿಧಾನಿಕ ಕರ್ತವ್ಯ ಎಂದು ರಾಜ್ಯಪಾಲರು ಮನಗಂಡಿದ್ದು ಶಶಿಕಲಾ ವಿರುದ್ಧ ದಾಖಲಾಗಿರುವ ಅಕ್ರಮ ಆಸ್ತಿ ಪ್ರಕರಣದ ತೀರ್ಪು ಈ ವಾರಾಂತ್ಯ ಹೊರಬೀಳುವ ನಿರೀಕ್ಷೆಯಿದೆ. ಆ ಬಳಿಕ ತನ್ನ ನಿರ್ಧಾರ ಪ್ರಕಟಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಪ್ರಕರಣದಲ್ಲಿ ಆರೋಪಿಯೆಂದು ಕಂಡು ಬಂದಲ್ಲಿ ಶಶಿಕಲಾ ಯಾವುದೇ ಹುದ್ದೆಗೆ ನೇಮಕಗೊಳ್ಳುವಂತಿಲ್ಲ ಅಥವಾ ಆರು ತಿಂಗಳವರೆಗೆ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. ಈ ಮಧ್ಯೆ ಶಶಿಕಲಾ ಬಣ ತೊರೆದು ಒ.ಪನ್ನೀರ್‌ಸೆಲ್ವಂ ಪಾಳಯಕ್ಕೆ ‘ನಿಷ್ಠಾಂತರ’ ಮಾಡುತ್ತಿರುವ ಶಾಸಕರ ಹಾಗೂ ಜನಪ್ರತಿನಿಧಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ.
ರಾಜ್ಯಪಾಲರು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ . ನಮ್ಮ ತಾಳ್ಮೆಗೂ ಒಂದು ಮಿತಿಯಿದೆ. ಆ ಬಳಿಕ ಅಗತ್ಯವಿರುವುದನ್ನು ಮಾಡುತ್ತೇವೆ ಎಂದು ಶಶಿಕಲಾ ಎಚ್ಚರಿಕೆ ನೀಡಿದ್ದರು. ಈ ಎಚ್ಚರಿಕೆ ರಾಜ್ಯಪಾಲರನ್ನು ಹೆದರಿಸದು. ಸ್ಥಿರ ಸರಕಾರ ಸ್ಥಾಪನೆಯಾಗಬೇಕು ಎಂಬುದು ರಾಜ್ಯಪಾಲ ಇಂಗಿತ ಎಂದು ಮೂಲಗಳು ತಿಳಿಸಿವೆ.
ಶಶಿಕಲಾರ ನಂಬಿಕಸ್ತ ಎಂದು ಪರಿಗಣಿಸಲಾಗಿದ್ದ ಶಿಕ್ಷಣ ಸಚಿವ ಕೆ.ಪಾಂಡಿರಾಜನ್ ಶನಿವಾರ ಪನ್ನೀರ್‌ಸೆಲ್ವಂ (ಒಪಿಎಸ್) ಬಣಕ್ಕೆ ನಿಷ್ಠೆ ಬದಲಿಸಿದ್ದು, ಇನ್ನಷ್ಟು ಶಾಸಕರು ತಮ್ಮನ್ನು ಅನುಸರಿಸಲಿದ್ದಾರೆ ಮತ್ತು ಪನ್ನೀರ್‌ಸೆಲ್ವಂ ಬಣದ ಶಾಸಕರ ಸಂಖ್ಯೆ 100ರ ಗಡಿ ದಾಟುವುದು ನಿಶ್ಚಿತ ಎಂದು ಹೇಳಿಕೆ ನೀಡಿರುವುದು ಶಶಿಕಲಾರನ್ನು ಕಂಗೆಡಿಸಿದೆ ಎನ್ನಲಾಗಿದೆ. ಎಐಎಡಿಎಂಕೆಯ ಇನ್ನಿಬ್ಬರು ಸಂಸದರು ಪನ್ನೀರ್‌ಸೆಲ್ವಂಗೆ ಬೆಂಬಲ ಸೂಚಿಸಿದ್ದಾರೆ. ಇದರೊಂದಿಗೆ ಪನ್ನೀರ್‌ಸೆಲ್ವಂಗೆ ಆರು ಸಂಸದರು, ಇಬ್ಬರು ರಾಜ್ಯಸಭಾ ಸದಸ್ಯರು, ಆರು ಶಾಸಕರು ಬೆಂಬಲ ಸೂಚಿಸಿದಂತಾಗಿದೆ. ಜೊತೆಗೆ, ರಾಜಕೀಯ ಕ್ಷೇತ್ರ ಪ್ರವೇಶಿಸಿರುವ ನಟರಾದ ರಾಮರಾಜನ್ ಮತ್ತು ತ್ಯಾಗು ಕೂಡಾ ನ್ನೀರ್‌ಸೆಲ್ವಂಗೆ ಬೆಂಬಲ ಘೋಷಿಸಿದ್ದಾರೆ.
ಶನಿವಾರ ಪಿ.ಆರ್.ಸುಂದರಂ, ಕೆ.ಅಶೋಕ್ ಕುಮಾರ್, ವಿ.ಸತ್ಯಭಾಮಾ ಮತ್ತು ವನರೋಜಾ ಅವರು ಪನ್ನೀರ್‌ಸೆಲ್ವಂ ಬಣಕ್ಕೆ ನಿಷ್ಠೆ ಬದಲಿಸಿದ್ದರೆ ರವಿವಾರ ಸೆಂಗುಟ್ಟುವನ್, ಜಯಸಿಂಗ್ ಮತ್ತು ಆರ್.ಪಿ. ಮರುಥರಾಜ ಪನ್ನೀರ್‌ಸೆಲ್ವಂ ಬಣದಲ್ಲಿ ಗುರುತಿಸಿಕೊಂಡಿದ್ದಾರೆ.
ಈ ಮಧ್ಯೆ ಇಬ್ಬರು ಸಚಿವರು ನಾಪತ್ತೆಯಾಗಿರುವುದಾಗಿ ದೂರು ದಾಖಲಾಗಿದೆ. ಕೃಷಿ ಸಚಿವ ದುರೈ ಕಣ್ಣನ್ ನಾಪತ್ತೆಯಾಗಿರುವುದಾಗಿ ತಂಜಾವೂರಿನ ಪಾಪನಾಶಂ ಪೊಲೀಸ್ ಠಾಣೆಯಲ್ಲಿ ಮತ್ತು ಸಚಿವ ಎಸ್.ವಲರ್‌ಮಥಿ ನಾಪತ್ತೆಯಾಗಿರುವುದಾಗಿ ತಿರುಚಿ ಠಾಣೆಯಲ್ಲಿ ದೂರು ದಾಖಲಾಗಿದೆ.
ತಮಗೆ 127 ಶಾಸಕರ ಬೆಂಬಲವಿದೆ. ಇವರಿಗೆ ಪನ್ನೀರ್‌ಸೆಲ್ವಂ ಬಣದವರು ಆಮಿಷ ಒಡ್ಡುವುದನ್ನು ತಪ್ಪಿಸುವ ಉದ್ದೇಶದಿಂದ ಇವರನ್ನು ಐಷಾರಾಮಿ ರೆಸಾರ್ಟ್ ಒಂದರಲ್ಲಿ ಇರಿಸಲಾಗಿದೆ ಎಂದು ಶಶಿಕಲಾ ಬಣ ಹೇಳಿದೆ. ರಾಜ್ಯಪಾಲರ ಆದೇಶದಂತೆ ಶನಿವಾರ ಜಿಲ್ಲಾಡಳಿತವು ಈ ಶಾಸಕರನ್ನು ಭೇಟಿಯಾಗಿ , ತಮ್ಮ ಇಚ್ಛೆಯಂತೆ ತಾವಿಲ್ಲಿ ಇದ್ದೇವೆ. ಯಾರೂ ಕೂಡಿಹಾಕಿಲ್ಲ ಎಂಬ ಒಕ್ಕಣೆಯುಳ್ಳ ಪತ್ರವನ್ನು ಅವರಿಂದ ಪಡೆದುಕೊಂಡಿದ್ದರು. ಶಶಿಕಲಾ ಬಣವು ಶಾಸಕರಿಂದ ಬಲವಂತವಾಗಿ ಕಾಲಿ ಹಾಳೆಯ ಮೇಲೆ ಸಹಿ ಹಾಕಿಸಿಕೊಂಡಿದೆ ಎಂಬ ಪನ್ನೀರ್‌ಸೆಲ್ವಂ ಬಣದ ಆರೋಪದ ಹಿನ್ನೆಲೆಯಲ್ಲಿ ರಾಜ್ಯಪಾಲರು ಈ ಆದೇಶ ನೀಡಿದ್ದರು.
ಇಂದು ತನ್ನನ್ನು ಬೆಂಬಲಿಸುವ ಶಾಸಕರನ್ನು ಭೇಟಿಮಾಡಿದ ಶಶಿಕಲಾ, ಜಯಲಲಿತಾರ ವಿರೋಧಿಗಳು ತಮ್ಮ ಮೇಲೆ ಆಕ್ರಮಣ ನಡೆಸುತ್ತಿದ್ದಾರೆ. ರಾಜ್ಯದ ರಾಜಕೀಯ ಬೆಳವಣಿಗೆಯನ್ನು ಗಮನಿಸುತ್ತಿದ್ದೇವೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲೆ ನಮಗೆ ನಂಬಿಕೆಯಿದೆ . ನಾವು ಗೆಲ್ಲಲಿದ್ದೇವೆ ಎಂದು ಹೇಳಿದರು. ರಾಜ್ಯದಲ್ಲಿ ಅನಿಶ್ಚಿತ ರಾಜಕೀಯ ಪರಿಸ್ಥಿತಿಯ ಕಾರಣ ಹಿಂಸಾತ್ಮಕ ಘಟನೆಗಳು ನಡೆಯಬಹುದು ಎಂಬ ಶಂಕೆಯ ಹಿನ್ನೆಲೆಯಲ್ಲಿ ಕನಿಷ್ಟ 1 ಸಾವಿರ ಸಮಾಜವಿರೋಧಿ ಶಕ್ತಿಗಳ ಬಗ್ಗೆ ನಿಗಾ ಇರಿಸಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.