ಉತ್ತರ ಕೊರಿಯದಿಂದ ಪ್ರಕ್ಷೇಪಕ ಕ್ಷಿಪಣಿ ಹಾರಾಟ
ಸಿಯೋಲ್, ಫೆ. 12: ಉತ್ತರ ಕೊರಿಯ ರವಿವಾರ ಪ್ರಕ್ಷೇಪಕ ಕ್ಷಿಪಣಿಯೊಂದನ್ನು ಸಮುದ್ರಕ್ಕೆ ಹಾರಿಸಿದೆ. ಇದು ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಉತ್ತರ ಕೊರಿಯ ನಡೆಸಿದ ಮೊದಲ ಪರೀಕ್ಷಾರ್ಥ ಕ್ಷಿಪಣಿ ಹಾರಾಟವಾಗಿದೆ.
ಇದಕ್ಕೆ ಪತಿಕ್ರಿಯಿಸಿರುವ ಅಮೆರಿಕ, ಉದ್ವಿಗ್ನತೆ ಹೆಚ್ಚಾಗದ ರೀತಿಯಲ್ಲಿ ಸೂಕ್ತವಾಗಿ ಪ್ರತಿಕ್ರಿಯಿಸಲಾಗುವುದು ಎಂದು ಹೇಳಿದೆ.
ಮಧ್ಯಮ ವ್ಯಾಪ್ತಿಯ ಕ್ಷಿಪಣಿಯನ್ನು ಪರೀಕ್ಷೆಗೊಳಪಡಿಸಲಾಗಿದ್ದು, ಅದು ಜಪಾನ್ ಸಮುದ್ರಕ್ಕೆ ಅಪ್ಪಳಿಸಿದೆ ಎಂದು ಅಮೆರಿಕದ ರಕ್ಷಣಾ ಇಲಾಖೆ ತಿಳಿಸಿದೆ. ಆದರೆ, ಅದು ತಾನು ಯಾವಾಗ ಬೇಕಾದರೂ ಪರೀಕ್ಷೆ ನಡೆಸಬಹುದು ಎಂದು ಹೇಳುತ್ತಿದ್ದ ಖಂಡಾಂತರ ಪ್ರಕ್ಷೇಪಕ ಕ್ಷಿಪಣಿಯಲ್ಲ ಎಂದಿದೆ.
ಉತ್ತರ ಕೊರಿಯ ಕಳೆದ ವರ್ಷ ವಿಶ್ವಸಂಸ್ಥೆಯ ನಿರ್ಣಯಗಳನ್ನು ಉಲ್ಲಂಘಿಸಿ ಹಲವಾರು ಪರಮಾಣು ಸಾಧನಗಳು ಮತ್ತು ಪ್ರಕ್ಷೇಪಕ ಕ್ಷಿಪಣಿಗಳನ್ನು ಪರೀಕ್ಷೆಗೊಳಪಡಿಸಿತ್ತು. ಇದಕ್ಕಾಗಿ ಉತ್ತರ ಕೊರಿಯದ ವಿರುದ್ಧ ಕಠಿಣವಾಗಿ ವ್ಯವಹರಿಸುತ್ತೇನೆ ಎಂದು ಹೇಳಿದ್ದ ಟ್ರಂಪ್‌ಗೆ ಈಗ ನಿಜವಾದ ಪರೀಕ್ಷೆ ಎದುರಾಗಿದೆ.
ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೇರಿದ ತಕ್ಷಣವೇ ಉತ್ತರ ಕೊರಿಯ ‘ಪ್ರಚೋದನಕಾರಿ’ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬುದನ್ನು ನಿರೀಕ್ಷಿಸಲಾಗಿತ್ತು ಟ್ರಂಪ್ ಆಡಳಿತದ ಅಧಿಕಾರಿಯೊಬ್ಬರು ಹೇಳಿದರು.
ನೂತನ ಕ್ಷಿಪಣಿ ಪರೀಕ್ಷೆಗೆ ಪ್ರತಿಯಾಗಿ ಯಾವ ರೀತಿಯ ಪ್ರತಿಕ್ರಿಯೆಯನ್ನು ನೀಡಬಹುದು ಎಂಬುದನ್ನು ಟ್ರಂಪ್ ಆಡಳಿತ ಪರಿಶೀಲಿಸುತ್ತಿದೆ ಎಂದು ಹೇಳಿದ ಅವರು, ಆದಾಗ್ಯೂ, ಅಮೆರಿಕದ ಪ್ರತಿಕ್ರಿಯೆಯು ಉದ್ವಿಗ್ನತೆಯನ್ನು ಹೆಚ್ಚಿಸದೆ ಸೌಮ್ಯವಾಗಿರುತ್ತದೆ ಎಂದರು.
ಅದೇ ವೇಳೆ, ಉತ್ತರ ಕೊರಿಯವನ್ನು ನಿಯಂತ್ರಣದಲ್ಲಿಡುವಂತೆ ಅಮೆರಿಕವು ಚೀನಾದ ಮೇಲೆ ಹೆಚ್ಚಿನ ಒತ್ತಡ ಹೇರುವ ಸಾಧ್ಯತೆಯಿದೆ ಎಂದು ಅಧಿಕಾರಿ ಹೇಳಿದರು.
ಈ ವಿಷಯದಲ್ಲಿ ಚೀನಾ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂಬುದಾಗಿ ಟ್ರಂಪ್ ಈ ಮೊದಲು ಹೇಳಿದ್ದರು.
ವೆಸ್ಟ್ ಪಾಮ್ ಬೀಚ್ (ಅಮೆರಿಕ), ಫೆ. 12: ಉತ್ತರ ಕೊರಿಯ ಪ್ರಕ್ಷೇಪಕ ಕ್ಷಿಪಣಿಯೊಂದರ ಪ್ರಾಯೋಗಿಕ ಹಾರಾಟ ನಡೆಸಿರುವ ಹಿನ್ನೆಲೆಯಲ್ಲಿ, ಜಪಾನ್‌ಗೆ ಅಮೆರಿಕವು ಸಂಪೂರ್ಣ ಬೆಂಬಲ ನೀಡುವುದು ಎಂಬುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಭರವಸೆ ನೀಡಿದ್ದಾರೆ.
‘‘ಅಮೆರಿಕದ ಶ್ರೇಷ್ಠ ಮಿತ್ರದೇಶವಾಗಿರುವ ಜಪಾನ್‌ಗೆ ಬೆಂಬಲವಾಗಿ ಅಮೆರಿಕ 100 ಶೇಕಡ ನಿಲ್ಲುತ್ತದೆ ಎಂಬುದನ್ನು ಎಲ್ಲರೂ ತಿಳಿಯಬೇಕೆಂದು ನಾನು ಬಯಸುತ್ತೇನೆ’’ ಎಂದು ಜಪಾನ್ ಪ್ರಧಾನಿ ಶಿಂರೊ ಅಬೆಯೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೇಳೆ ಟ್ರಂಪ್ ಈ ಹೇಳಿಕೆ ನೀಡಿದರು.