×
Ad

ಅಮೆರಿಕದ ನಿರ್ಧಾರ ಸಾರಾಸಗಟು ತಾರತಮ್ಯ: ಫೆಲೆಸ್ತೀನ್ ಅಧಿಕಾರಿ

Update: 2017-02-12 20:47 IST

ಜಿದ್ದಾ, ಫೆ. 12: ಲಿಬಿಯಕ್ಕೆ ವಿಶ್ವಸಂಸ್ಥೆಯ ರಾಯಭಾರಿಯನ್ನಾಗಿ ಫೆಲೆಸ್ತೀನ್‌ನ ಮಾಜಿ ಪ್ರಧಾನಿ ಸಲಾಮ್ ಫಯಾದ್‌ರನ್ನು ನೇಮಿಸುವ ಪ್ರಸ್ತಾಪವನ್ನು ತಡೆಯುವ ಅಮೆರಿಕದ ನಿರ್ಧಾರ ‘ಸಾರಾಸಗಟು ತಾರತಮ್ಯ’ವಾಗಿದೆ ಎಂದು ಫೆಲೆಸ್ತೀನ್‌ನ ಹಿರಿಯ ಅಧಿಕಾರಿಯೊಬ್ಬರು ಬಣ್ಣಿಸಿದ್ದಾರೆ.

ಈ ಹುದ್ದೆಗೆ ಫಯಾದ್‌ರ ನೇಮಕವನ್ನು ತಾನು ಬೆಂಬಲಿಸುವುದಿಲ್ಲ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇಮಿಸಿರುವ ವಿಶ್ವಸಂಸ್ಥೆ ರಾಯಭಾರಿ ನಿಕ್ಕಿ ಹೇಲಿ ಹೇಳಿದ್ದಾರೆ.

‘‘ಸುದೀರ್ಘ ಕಾಲ ವಿಶ್ವಸಂಸ್ಥೆಯು ಫೆಲೆಸ್ತೀನ್ ಪ್ರಾಧಿಕಾರದ ಪರವಾಗಿ ಪಕ್ಷಪಾತಪೂರಿತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ ಹಾಗೂ ಇದರಿಂದ ನಮ್ಮ ಮಿತ್ರ ದೇಶ ಇಸ್ರೇಲ್‌ನ ಹಿತಾಸಕ್ತಿಗೆ ಧಕ್ಕೆಯಾಗುತ್ತಿದೆ’’ ಎಂದು ಹೇಲಿ ಹೇಳಿದರು.

ಅಮೆರಿಕದ ಈ ಕ್ರಮವನ್ನು ಫೆಲೆಸ್ತೀನ್ ಲಿಬರೇಶನ್ ಆರ್ಗನೈಸೇಶನ್ (ಪಿಎಲ್‌ಒ)ನ ಮಹಾಕಾರ್ಯದರ್ಶಿ ಸಯೀಬ್ ಎರೆಕಟ್ ಖಂಡಿಸಿದ್ದಾರೆ.

‘‘ಇದು ರಾಷ್ಟ್ರೀಯತೆಯ ಆಧಾರದಲ್ಲಿ ನಡೆಸಲಾಗುತ್ತಿರುವ ಸಾರಾಸಗಟು ತಾರತಮ್ಯವಾಗಿದೆ ಹಾಗೂ ನಾವಿದನ್ನು ಖಂಡತುಂಡವಾಗಿ ತಿರಸ್ಕರಿಸುತ್ತೇವೆ. ಈ ನಿರ್ಧಾರವನ್ನು ಕೂಡಲೇ ಮರುಪರಿಶೀಲಿಸುವಂತೆ ನಾವು ಟ್ರಂಪ್ ಆಡಳಿತಕ್ಕೆ ಕರೆ ನೀಡುತ್ತೇವೆ’’ ಎಂದು ಎರೆಕಟ್ ಶನಿವಾರ ‘ಅರಬ್ ನ್ಯೂಸ್’ಗೆ ತಿಳಿಸಿದರು.

ವಿಶ್ವಸಂಸ್ಥೆ ಸಿಬ್ಬಂದಿ ವೈಯಕ್ತಿಕ ನೆಲೆಯಲ್ಲಿ ಕೆಲಸ ಮಾಡುತ್ತಾರೆ

ಫಯಾದ್‌ರನ್ನು ಲಿಬಿಯಕ್ಕೆ ವಿಶ್ವಸಂಸ್ಥೆಯ ರಾಯಭಾರಿಯನ್ನಾಗಿ ನೇಮಿಸುವ ತನ್ನ ನಿರ್ಧಾರವನ್ನು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೊ ಗುಟರಸ್ ಅಮೆರಿಕದ ತಿರಸ್ಕಾರದ ಬಳಿಕ ಸಮರ್ಥಿಸಿಕೊಂಡಿದ್ದಾರೆ.

 ‘‘ಫಯಾದ್‌ರ ಸಾಬೀತಾಗಿರುವ ವೈಯಕ್ತಿಕ ಅರ್ಹತೆಗಳು ಮತ್ತು ಅವರ ಸಾಮರ್ಥ್ಯದ ಆಧಾರದಲ್ಲೇ ಈ ನೇಮಕಾತಿ ನಡೆದಿದೆ’’ ಎಂದು ವಿಶ್ವಸಂಸ್ಥೆಯ ವಕ್ತಾರ ಸ್ಟೀಫನ್ ಡುಜರಿಕ್ ಹೇಳಿದರು.

ವಿಶ್ವಸಂಸ್ಥೆಯ ಸಿಬ್ಬಂದಿ ಕಟ್ಟುನಿಟ್ಟಾಗಿ ತಮ್ಮ ವೈಯಕ್ತಿಕ ನೆಲೆಯಲ್ಲಿ ಕೆಲಸ ಮಾಡುತ್ತಾರೆ. ಅವರು ಯಾವುದೇ ಸರಕಾರ ಅಥವಾ ದೇಶವನ್ನು ಪ್ರತಿನಿಧಿಸುವುದಿಲ್ಲ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News