ಸತ್ಯಾರ್ಥಿ ನಿವಾಸದಲ್ಲಿ ಕಳ್ಳತನ ಮಾಡಿದ್ದ ಮೂವರ ಸೆರೆ
ಹೊಸದಿಲ್ಲಿ,ಫೆ.12: ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಕೈಲಾಷ್ ಸತ್ಯಾರ್ಥಿ ಅವರ ಆಗ್ನೇಯ ದಿಲ್ಲಿಯ ಕಾಲ್ಕಾಜಿ ಪ್ರದೇಶದಲ್ಲಿಯ ನಿವಾಸದಿಂದ ನೊಬೆಲ್ ಪ್ರಶಸ್ತಿಯ ಪ್ರತಿಕೃತಿ, ಪ್ರಮಾಣಪತ್ರ ಮತ್ತು ಚಿನ್ನಾಭರಣಗಳನ್ನು ಕಳವು ಮಾಡಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ರಾಜನ್, ಸುನಿಲ್ ಮತ್ತು ವಿನೋದ್ ಬಂಧಿತ ವ್ಯಕ್ತಿಗಳಾಗಿದ್ದು, ಕಳವು ಮಾಡಿದ್ದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು.
ಫೆ.7ರಂದು ಕಳ್ಳತನ ನಡೆದಾಗ ಸತ್ಯಾರ್ಥಿಯವರು ಮನೆಯಲ್ಲಿರಲಿಲ್ಲ. ಅವರು ಸಮ್ಮೇಳನವೊಂದರಲ್ಲಿ ಭಾಗವಹಿಸಲು ಪತ್ನಿ ಸಹಿತ ಪನಾಮಾಕ್ಕೆ ತೆರಳಿದ್ದರು.
ಮಕ್ಕಳ ಹಕ್ಕುಗಳ ಕಾರ್ಯಕರ್ತರಾಗಿರುವ ಸತ್ಯಾರ್ಥಿ 2014ರಲ್ಲಿ ಪಾಕಿಸ್ತಾನದ ಮಹಿಳಾ ಶಿಕ್ಷಣ ಪ್ರತಿಪಾದಕಿ ಮಲಾಲಾ ಯೂಸುಫ್‌ಝಾಯಿ ಅವರೊಂದಿಗೆ ನೊಬೆಲ್ ಶಾಂತಿ ಬಹುಮಾನವನ್ನು ಹಂಚಿಕೊಂಡಿದ್ದರು.
ಸತ್ಯಾರ್ಥಿ ತನ್ನ ನೊಬೆಲ್ ಪದಕವನ್ನು 2015, ಜನವರಿಯಲ್ಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರಿಗೆ ಉಡುಗೊರೆಯಾಗಿ ನೀಡಿದ್ದು, ಅದನ್ನು ರಾಷ್ಟ್ರಪತಿ ಭವನದ ಮ್ಯೂಝಿಯಮ್‌ನಲ್ಲಿ ಪ್ರದರ್ಶನಕ್ಕಿರಿಸಲಾಗಿದೆ.