ಎಐಎಡಿಎಂಕೆ ಕಚ್ಚಾಟ: ರೆಸಾರ್ಟ್ ಬಳಿ ಪತ್ರಕರ್ತರಿಗೆ ಹಲ್ಲೆ
ಚೆನ್ನೈ,ಫೆ.13: ಭದ್ರಕೋಟೆಯಾಗಿ ಪರಿವರ್ತನೆಗೊಂಡಿರುವ ಆಡಳಿತ ಎಐಎಡಿಎಂಕೆ ಶಾಸಕರನ್ನು ಇರಿಸಲಾಗಿರುವ ಕೂವತ್ತೂರಿನ ಗೋಲ್ಡನ್ ಬೇ ರೆಸಾರ್ಟ್ ಬಳಿ ಪತ್ರಕರ್ತರ ಗುಂಪೊಂದರ ಮೇಲೆ ಹಲ್ಲೆ ನಡೆದಿದ್ದು, ಅವರ ಕ್ಯಾಮರಾಗಳು ಮತ್ತು ಮೊಬೈಲ್ ಫೋನ್‌ಗಳನ್ನು ಕಿತ್ತುಕೊಳ್ಳಲಾಗಿದೆ.
ಹಿನ್ನೀರಿನಿಂದ ಸುತ್ತುವರಿದಿರುವ ಗೋಲ್ಡನ್ ಬೇ ರೆಸಾರ್ಟ್‌ಗೆ ಹೋಗುವ ಏಕೈಕ ರಸ್ತೆಯಲ್ಲಿ ತಡೆಯನ್ನೊಡ್ಡಿದ್ದ ಕೆಲವು ಗೂಂಡಾಗಳು ತಮ್ಮ ಮೇಲೆ ಹಲ್ಲೆ ನಡೆಸಿದ್ದಾಗಿ ಪತ್ರಕರ್ತರು ತಿಳಿಸಿದ್ದಾರೆ.
ನಿನ್ನೆ ತಡರಾತ್ರಿ ಈ ಘಟನೆ ನಡೆದಿದ್ದು, ತಮ್ಮ ಮೇಲೆ ಹಲ್ಲೆ ನಡೆಸಿ ಕ್ಯಾಮರಾ ಮತ್ತು ಮೊಬೈಲ್‌ಗಳನ್ನು ಕಸಿದುಕೊಳ್ಳುತ್ತಿದ್ದಾಗ ಪೊಲೀಸರು ವೌನವೀಕ್ಷಕರಾಗಿದ್ದರು ಎಂದು ಅವರು ಆಪಾದಿಸಿದ್ದಾರೆ. ಈ ಬಗ್ಗೆ ಕೂಡಲೇ ಕ್ರಮಕ್ಕೆ ಆಗ್ರಹಿಸಿ ಪತ್ರಕರ್ತರು ಧರಣಿ ಪ್ರತಿಭಟನೆಯನ್ನೂ ನಡೆಸಿದರು.
ಕಳೆದ ವಾರ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ ಬಳಿಕ ಮೊದಲ ಬಾರಿಗೆ ಇಂದು ಕಚೇರಿಗೆ ಹಾಜರಾಗಿರುವ ಒ.ಪನ್ನೀರಸೆಲ್ವಂ ಅವರು ಈ ಘಟನೆಯ ಬಗ್ಗೆ ವಿಚಾರಣೆಗೆ ಆದೇಶಿಸಿದ್ದಾರೆ.
ಪತ್ರಕರ್ತರ ಸಂಘಟನೆಗಳು ಮತ್ತು ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ.ಸ್ಟಾಲಿನ್ ಅವರು ಘಟನೆಯನ್ನು ಖಂಡಿಸಿದ್ದಾರೆ.
ಕಳೆದ ರಾತ್ರಿ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ಅವರು ತನ್ನ ಪಕ್ಷದ ಶಾಸಕರನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂಬ ಮಾಹಿತಿ ಪಡೆದಿದ್ದ ಪತ್ರಕರ್ತರು ರೆಸಾರ್ಟ್‌ನತ್ತ ದೌಡಾಯಿಸಿದ್ದರು. ರೆಸಾರ್ಟ್‌ಗೆ ಹೋಗುವ ಏಕೈಕ ಸಾರ್ವಜನಿಕ ರಸ್ತೆಯಲ್ಲಿ ಸಂಚಾರಕ್ಕೆ ಪ್ರತಿಬಂಧವನ್ನೊಡ್ಡಿರುವುದನ್ನು ಸ್ಥಳೀಯ ನಿವಾಸಿಗಳು ವಿರೋಧಿಸಿದ್ದಾರೆ.
ಕಳೆದ ವಾರ ಎಐಎಡಿಎಂಕೆ ಶಾಸಕರು ಈ ರೆಸಾರ್ಟ್‌ಗೆ ಬಂದಾಗಿನಿಂದಲೂ ಈ ರಸ್ತೆಯನ್ನು ಪ್ರವೇಶಿಸಲು ಶಶಿಕಲಾ ಮತ್ತು ಹಿರಿಯ ಎಡಿಎಂಕೆ ನಾಯಕರನ್ನು ಹೊರತು ಪಡಿಸಿ ಬೇರೆ ಯಾರಿಗೂ ಅವಕಾಶವಿಲ್ಲ.