ಪಂಜಾಬ್ ನಲ್ಲಿ ಮತಯಂತ್ರವನ್ನು ಭದ್ರತಾ ಕೊಠಡಿಯಿಂದ ಹೊರಗೊಯ್ಯುತ್ತಿರುವ ಆಘಾತಕಾರಿ ವೀಡಿಯೊ ಪೋಸ್ಟ್ ಮಾಡಿದ ಕೇಜ್ರಿವಾಲ್
ನವದೆಹಲಿ: ಇತ್ತೀಚೆಗೆ ವಿಧಾನಸಭಾ ಚುನಾವಣೆಗಳು ನಡೆದ ಪಂಜಾಬ್ ರಾಜ್ಯದಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು ಭದ್ರತಾ ಕೊಠಡಿಯೊಂದರಿಂದ ಹೊರಕ್ಕೆ ತೆಗೆದುಕೊಂಡು ಹೋಗಲಾಗುತ್ತಿರುವ ದೃಶ್ಯವಿರುವ ವೀಡಿಯೋವೊಂದನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪೋಸ್ಟ್ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್ ಕೂಡ ಮಾಡಿದ ಕೇಜ್ರಿವಾಲ್ ‘‘ಇದು ನಿಜಕ್ಕೂ ಆಘಾತಕಾರಿ. ಪಂಜಾಬ್ ಅಧಿಕಾರಿಗಳು ಇವಿಎಂಗಳನ್ನು ತೆಗೆದುಕೊಂಡು ಹೋಗಲು ಯತ್ನಿಸುತ್ತಿದ್ದಾರೆ,’’ಎಂದೂ ಆರೋಪಿಸಿದ್ದಾರೆ.
ಕೇಜ್ರಿವಾಲ್ ಅವರ ಸಹೊದ್ಯೋಗಿ ಹಾಗೂ ಎಎಪಿಯ ಪಂಜಾಬ್ ವ್ಯವಹಾರಗಳ ಉಸ್ತುವಾರಿ ದುರ್ಗೇಶ್ ಪಾಠಕ್ ಕೂಡ ಇದೇ ವೀಡಿಯೊ ಪೋಸ್ಟ್ ಮಾಡಿ ರಿಟರ್ನಿಂಗ್ ಆಫೀಸರ್‌ವೀಡಿಯೋದಲ್ಲಿ ಕಾಣಿಸುವ ಕೆಲ ವ್ಯಕ್ತಿಗಳಿಗೆ ಕೆಲ ಕಾಗದ ಪತ್ರಗಳನ್ನು ತೆಗೆದುಕೊಂಡು ಹೋಗಲು ಮಾತ್ರ ಅನುಮತಿಸಿದ್ದರು ಎಂದು ಬರೆದಿದ್ದಾರೆ.
‘‘ರಿಟರ್ನಿಂಗ್ ಆಫೀಸರ್ ನಾಲ್ಕು ಜನರಿಗೆ ವಿದ್ಯುನ್ಮಾನ ಮತಯಂತ್ರಗಳಿರುವ ಸ್ಟ್ರಾಂಗ್ ರೂಮ್ ಪ್ರವೇಶಿಸಲು ಹಾಗೂ ಕೆಲ ಕಾಗದ ಪತ್ರಗಳನ್ನು ಕೊಂಡೊಯ್ಯಲು ಅನುಮತಿಸಿದ್ದರೂ ಅವರು ಮತಯಂತ್ರಗಳಿರುವ ಕೆಲ ಪಟ್ಟಿಗೆಗಳನ್ನು ತೆಗೆಯಲೂ ಯತ್ನಿಸಿದರು,’’ ಎಂದು ಪಾಠಕ್ ಟ್ವೀಟ್ ಮಾಡಿದ್ದಾರೆ.
ವೀಡಿಯೊದಲ್ಲಿ ವ್ಯಕ್ತಿಯೊಬ್ಬ ಮತಯಂತ್ರವಿರುವ ಪೆಟ್ಟಿಗೆಯನ್ನು ಎತ್ತಿ ಅದನ್ನು ಮೆಟ್ಟಲಿನ ಪಕ್ಕದಲ್ಲಿರುವ ಕತ್ತಲೆಯ ಕೋಣೆಗೆ ಕೊಂಡೊಯ್ಯುವುದು ಕಾಣಿಸುತ್ತದೆ.
ದೆಹಲಿ ವಿಧಾನಸಭಾ ಚುನಾವಣೆಯ ನಂತರ ಎಎಪಿಯ ಕಾರ್ಯಕರ್ತರು ಕೂಡ ಮತಯಂತ್ರಗಳನ್ನಿಟ್ಟಿದ್ದ ಕಟ್ಟಡಕ್ಕೆ ಕಾವಲು ನಿಂತಿದ್ದರು. ಆದರೆ ಪಂಜಾಬ್ ನಲ್ಲಿ ಈ ಬಾರಿ ಮತದಾನ ನಡೆದು ಒಂದು ತಿಂಗಳ ನಂತರ ಮತ ಎಣಿಕೆ ನಡೆಯುವುದರಿಂದ ಅಷ್ಟು ದಿನಗಳ ಕಾಲ ಅವುಗಳ ಮೇಲೆ ಕಾರ್ಯಕರ್ತರಿಗೆ ನಿಗಾ ಇಡುವುದು ಕಷ್ಟವೆಂದು ಹಲವಾರು ಎಎಪಿ ನಾಯಕರುಗಳು ಹೇಳಿಕೊಂಡಿದ್ದಾರೆ.
ಈಗಾಗಲೇ ಎಎಪಿ ಕಾರ್ಯಕರ್ತರಿಗೆ ಹಾಗೂ ಬೆಂಬಲಿಗರಿಗೆ ವಿದ್ಯುನ್ಮಾನ ಮತಯಂತ್ರಗಳ ಸುರಕ್ಷೆಯ ವಿಚಾರದಲ್ಲಿ ಬಹಳಷ್ಟು ಚಿಂತೆಯಿದೆ. ಚುನಾವಣೆಗಳು ಮಾರ್ಚ್ 4ರಂದು ನಡೆದಿದ್ದರೆ ಮತ ಎಣಿಕೆ ಮಾರ್ಚ್ 11ರಂದು ನಡೆಯುವುದು.
This is absolutely shocking. Punjab officials trying to remove EVM machines https://t.co/7qggvhTDd2
— Arvind Kejriwal (@ArvindKejriwal) February 13, 2017