×
Ad

ಭಾರತದಲ್ಲಿ ಹಿಂದೂಗಳ ಜನಸಂಖ್ಯೆ ಕಡಿಮೆಯಾಗುತ್ತಿದೆ: ಕೇಂದ್ರ ಸಚಿವ ರಿಜಿಜು

Update: 2017-02-13 18:30 IST

ಹೊಸದಿಲ್ಲಿ,ಫೆ.13: ಹಿಂದುಗಳು ಜನರನ್ನೆಂದೂ ಮತಾಂತರಗೊಳಿಸುವುದಿಲ್ಲ, ಹೀಗಾಗಿ ಭಾರತದಲ್ಲಿ ಅವರ ಸಂಖ್ಯೆ ಕುಗ್ಗುತ್ತಿದೆ. ಇದೇ ವೇಳೆ ಅಲ್ಪಸಂಖ್ಯಾತರ ಸಂಖ್ಯೆ ಹೆಚ್ಚುತ್ತಿದೆ. ಇದು ನಮ್ಮ ನೆರೆಹೊರೆಯ ಕೆಲವು ರಾಷ್ಟ್ರಗಳಲ್ಲಿ ಕಂಡುಬರುತ್ತಿರುವ ಪ್ರವೃತ್ತಿಗೆ ವಿರುದ್ಧವಾಗಿದೆ ಎಂದು ಸಹಾಯಕ ಗೃಹಸಚಿವ ಕಿರಣ ರಿಜಿಜು ಅವರು ಸೋಮವಾರ ಹೇಳಿದ್ದು, ಅವರ ಈ ಟ್ವೀಟ್ ಹೊಸದೊಂದು ವಿವಾದವನ್ನು ಸೃಷ್ಟಿಸುವ ಸಾಧ್ಯತೆಯಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರವು ಅರುಣಾಚಲ ಪ್ರದೇಶವನ್ನು ಹಿಂದು ರಾಜ್ಯವನ್ನಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿದೆ ಎಂದು ಅರುಣಾಚಲ ಪ್ರದೇಶ ಕಾಂಗ್ರೆಸ್ ಸಮಿತಿಯು ಆರೋಪಿಸಿದ ಬಳಿಕ ರಿಜಿಜು ಅವರ ಈ ಹೇಳಿಕೆ ಹೊರಬಿದ್ದಿದೆ.

ಕಾಂಗ್ರೆಸ್ ಏಕೆ ಇಂತಹ ಹೊಣೆಗೇಡಿತನದ ಹೇಳಿಕೆಗಳನ್ನು ನೀಡುತ್ತಿದೆ? ಅರುಣಾಚಲ ಪ್ರದೇಶದ ಜನರು ಪರಸ್ಪರರೊಂದಿಗೆ ಒಂದಾಗಿ ಶಾಂತಿಯಿಂದ ಬದುಕುತ್ತಿದ್ದಾರೆ. ಕಾಂಗ್ರೆಸ್ ಇಂತಹ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಬಾರದು ಎಂದು ಸರಣಿ ಟ್ವೀಟ್‌ಗಳಲ್ಲಿ ರಿಜಿಜು ಹೇಳಿದ್ದಾರೆ.

ಭಾರತವು ಜಾತ್ಯತೀತ ರಾಷ್ಟ್ರವಾಗಿದೆ. ಇಲ್ಲಿ ಎಲ್ಲ ಧಾರ್ಮಿಕ ಗುಂಪುಗಳು ಸ್ವಾತಂತ್ರವನ್ನು ಅನುಭವಿಸುತ್ತಿವೆ ಮತ್ತು ಶಾಂತಿಯಿಂದ ಬದುಕುತ್ತಿವೆ ಎಂದು ಅವರು ಹೇಳಿದ್ದಾರೆ. ರಿಜಿಜು ಅರುಣಾಚಲ ಪ್ರದೇಶದವರಾಗಿದ್ದು, ಬೌದ್ಧಧರ್ಮಕ್ಕೆ ಸೇರಿದವರಾಗಿದ್ದಾರೆ.

 ರಿಜಿಜು ಹೇಳಿಕೆಗೆ ಪ್ರತಿಕ್ರಿಯಿಸಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಉವೈಸಿ ಅವರು, ತಾನು ಎಲ್ಲ ಭಾರತೀಯರಿಗೂ ಸಚಿವನಾಗಿದ್ದೇನೆ,ಹಿಂದುಗಳಿಗೆ ಮಾತ್ರ ಅಲ್ಲ ಎನ್ನುವುದನ್ನು ರಿಜಿಜು ಮರೆಯಬಾರದು ಎಂದಿದ್ದಾರೆ.

ಇತರ ದೇಶಗಳಲ್ಲಿಯ ಅಲ್ಪಸಂಖ್ಯಾತರಿಗೂ ಭಾರತದಲ್ಲಿನ ಅಲ್ಪಸಂಖ್ಯಾತರಿಗೂ ಏನು ಸಂಬಂಧ? ನಮಗೆ ಸಂವಿಧಾನವು ಹಕ್ಕುಗಳನ್ನು ಖಾತರಿಪಡಿಸಿದೆ ಎಂದು ಹೈದರಾಬಾದ್ ಸಂಸದರೂ ಆಗಿರುವ ಉವೈಸಿ ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News