×
Ad

ಗೂಢಚಾರಿಕೆಯ ಬಂಧನ: ಕಾಂಗ್ರೆಸ್, ಬಿಜೆಪಿ ಬೆಂಬಲಿಗರ ಘರ್ಷಣೆ

Update: 2017-02-13 20:58 IST

ಇಂದೋರ್,ಫೆ.13: ಪಾಕಿಸ್ತಾನದ ಪರವಾಗಿ ಗೂಢಚರ್ಯೆ ನಡೆಸಿದ ಆರೋಪದಲ್ಲಿ ಇತ್ತೀಚೆಗೆ ಬಂಧಿತರಾದ 11 ಮಂದಿಯಲ್ಲಿ ಒಬ್ಬರಾದ ಧ್ರುವಸಕ್ಸೇನಾ ಜೊತೆ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ್ ವರ್ಗೀಯ ಜೊತೆ ಹೊಂದಿರುವ ನಂಟಿನ ಬಗ್ಗೆ ತನಿಖೆಗೆ ಆಗ್ರಹಿಸಿ ಸೋಮವಾರ ಇಂದೋರ್‌ನಲ್ಲಿ ಧರಣಿ ನಡೆಸುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಬಿಜೆಪಿ ಬೆಂಬಲಿಗರು ಘರ್ಷಣೆಗಿಳಿದ ಸಂದರ್ಭದಲ್ಲಿ ಕನಿಷ್ಠ ನಾಲ್ವರು ಗಾಯಗೊಂಡಿದ್ದಾರೆ.

  ಸುಮಾರು 50 ಮಂದಿ ಕಾಂಗ್ರೆಸ್ ಕಾರ್ಯಕರ್ತರ ಗುಂಪೊಂದು, ವಿಜಯ್‌ವರ್ಗೀಯ ಹಾಗೂ ಆರೋಪಿ ಸಕ್ಸೇನಾ ನಡುವೆ ಇರುವ ಸಂಬಂಧದ ಬಗ್ಗೆ ತನಿಖೆಗೆ ಆಗ್ರಹಿಸಿ ಇಂದೋರ್‌ನ ಪರದೇಶಿಪುರ ಪೊಲೀಸ್ ಠಾಣೆಯಲ್ಲಿ ಇಂದು ಬೆಳಗ್ಗೆ ಧರಣಿ ನಡೆಸುತ್ತಿದ್ದರು. ಸಕ್ಸೇನಾ ಹಾಗೂ ವಿಜಯ್‌ವರ್ಗೀಯ ಜೊತೆಯಾಗಿರುವ ಭಾವಚಿತ್ರಗಳನ್ನು ಅವರು ಪ್ರದರ್ಶಿಸುತ್ತಿದ್ದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ನಡುವೆ ಘರ್ಷಣೆ ಭುಗಿಲೆದ್ದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

 ಘರ್ಷಣೆಯಲ್ಲಿ ತಲಾ ಇಬ್ಬರು ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರಿಗೆ ಗಾಯಗಳಾಗಿದ್ದು, ಎರಡೂ ಗುಂಪುಗಳು ಪರಸ್ಪರ ವಿರುದ್ಧ ದೂರು ನೀಡಿವೆ ಹಾಗೂ ಈ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಸ್ಥಳೀಯ ಠಾಣಾಧಿಕಾರಿ ಸುಧೀರ್‌ಕುಮಾರ್ ತಿಳಿಸಿದ್ದಾರೆ.

 ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಬಿಜೆಪಿ ನಾಯಕರು ಪೊಲೀಸರ ಸಮಕ್ಷಮದಲ್ಲೇ ದೊಣ್ಣೆಗಳು ಹಾಗೂ ಬೇಸ್‌ಬಾಲ್ ಬ್ಯಾಟ್‌ಗಳಿಂದ ದಾಳಿ ನಡೆಸಿದ್ದಾರೆಂದು ರಾಜ್ಯ ಕಾಂಗ್ರೆಸ್ ವಕ್ತಾರ ನರೇಂದ್ರ ಸಲೂಜಾ ಆರೋಪಿಸಿದ್ದಾರೆ.

 ಈ ಮಧ್ಯೆ ವಿಜಯ್‌ವರ್ಗೀಯ ಅವರಿಗೆ ಬೇಹುಗಾರಿಕೆ ಆರೋಪಿ ಸಕ್ಸೇನಾ ಜೊತೆ ಸಂಪರ್ಕವಿದೆಯೆಂಬ ಆರೋಪವನ್ನು ಬಿಜೆಪಿಯ ಮಾಧ್ಯಮ ವಿಭಾಗದ ಉಸ್ತುವಾರಿ ಲೋಕೇಂದ್ರ ಪರಾಶರ್ ನಿರಾಕರಿಸಿದ್ದಾರೆ. ವಿಜಯ್‌ವರ್ಗೀಯ ಹಿರಿಯ ನಾಯಕನಾಗಿದ್ದು, ಅವರು ಹಲವಾರು ಸಭೆಸಮಾರಂಭಗಳಲ್ಲಿ ಭಾಗವಹಿಸಬೇಕಾಗುತ್ತದೆ. ಇಂತಹ ಕಾರ್ಯಕ್ರಮಗಳಲ್ಲಿ ಹಲವಾರು ಮಂದಿ ಅವರೊಂದಿಗೆ ಫೋಟೋ ತೆಗೆಸಿಕೊಂಡಿರುತ್ತಾರೆ. ಹೀಗಿರುವಾಗ ಇಂತಹ ಭಾವಚಿತ್ರಗಳಿಂದ ಅವರಿಗೆ ಯಾವುದೇ ಆರೋಪಿಯ ಜೊತೆ ಸಂಪರ್ಕವಿದೆಯೆಂಬುದನ್ನು ಸಾಬೀತುಪಡಿಸಲು ಸಾಧ್ಯವಿಲ್ಲವೆಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News