‘ಇಸ್ಲಾಮ್ ಭಯ’ದಿಂದ ಭಯೋತ್ಪಾದನೆಗೆ ಪ್ರಚೋದನೆ: ವಿಶ್ವಸಂಸ್ಥೆ ಮುಖ್ಯಸ್ಥ

Update: 2017-02-13 15:45 GMT

ರಿಯಾದ್, ಫೆ. 13: ಪ್ರಪಂಚದ ಕೆಲವು ಭಾಗಗಳಲ್ಲಿ ಕಂಡುಬರುತ್ತಿರುವ ‘ಇಸ್ಲಾಮ್ ಭಯ’ವು ಭಯೋತ್ಪಾದನೆಗೆ ಪ್ರಚೋದನೆ ನೀಡುತ್ತಿದೆ ಎಂದು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೊ ಗುಟರಸ್ ರವಿವಾರ ಹೇಳಿದ್ದಾರೆ.

ಸೌದಿ ಅರೇಬಿಯ ಪ್ರವಾಸದಲ್ಲಿರುವ ಗುಟರಸ್ ಇಲ್ಲಿ ಸೌದಿ ದೊರೆ ಸಲ್ಮಾನ್, ಯುವರಾಜ ಹಾಗೂ ಆಂತರಿಕ ಸಚಿವ ಮುಹಮ್ಮದ್ ಬಿನ್ ನಯೀಫ್ ಮತ್ತು ಉಪ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ಜೊತೆ ಮಾತುಕತೆ ನಡೆಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು.

‘‘ಜಗತ್ತಿನ ಹಲವು ಭಾಗಗಳಲ್ಲಿ ಕಂಡುಬರುತ್ತಿರುವ ‘ಇಸ್ಲಾಮ್ ಭಯ’ದ ಲಕ್ಷಣಗಳು, ಇಸ್ಲಾಮ್ ಭಯದ ನೀತಿಗಳು ಮತ್ತು ಇಸ್ಲಾಮ್ ಭಯದ ದ್ವೇಷ ಭಾಷಣಗಳು ಭಯೋತ್ಪಾದನೆಗೆ ಪ್ರಚೋದನೆ ನೀಡುತ್ತಿರುವ ಹಲವು ಸಂಗತಿಗಳಲ್ಲಿ ಸೇರಿವೆ’’ ಎಂದು ಸೌದಿ ವಿದೇಶ ಸಚಿವ ಆದಿಲ್ ಅಲ್-ಜಬೈರ್ ಜೊತೆಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗುಟರಸ್ ನುಡಿದರು.

‘‘ಇಂಥದೇ ಪ್ರಚೋದನೆಗಾಗಿ ಐಸಿಸ್ ಉಗ್ರರು ಕಾಯುತ್ತಿರುತ್ತಾರೆ’’ ಎಂದರು.ಅಮೆರಿಕದ ಡೊನಾಲ್ಡ್ ಟ್ರಂಪ್ ಆಡಳಿತವು ಇತ್ತೀಚೆಗೆ ಇರಾನ್, ಇರಾಕ್, ಲಿಬಿಯ, ಸೊಮಾಲಿಯ, ಸುಡಾನ್, ಸಿರಿಯ ಮತ್ತು ಯಮನ್‌ನ ನಾಗರಿಕರ ಅಮೆರಿಕ ಪ್ರವೇಶಕ್ಕೆ90 ದಿನಗಳ ನಿಷೇಧ ವಿಧಿಸಿರುವುದನ್ನು ಸ್ಮರಿಸಬಹುದಾಗಿದೆ.

ಲಿಬಿಯಕ್ಕೆ ವಿಶ್ವಸಂಸ್ಥೆಯ ರಾಯಭಾರಿಯಾಗಿ ಫಯಾದ್ ಸಮರ್ಥ

ಲಿಬಿಯಕ್ಕೆ ವಿಶ್ವಸಂಸ್ಥೆಯ ರಾಯಭಾರಿ ಹುದ್ದೆಗೆ ಫೆಲೆಸ್ತೀನ್‌ನ ಮಾಜಿ ಪ್ರಧಾನಿ ಸಲಾಮ್ ಫಯಾದ್ ಸರಿಯಾದ ವ್ಯಕ್ತಿ ಎಂಬುದಾಗಿ ತಾನು ಭಾವಿಸಿದ್ದೇನೆ ಎಂದು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೊ ಗುಟರಸ್ ಸೋಮವಾರ ಹೇಳಿದ್ದಾರೆ.

ಗುಟರಸ್‌ರ ಆಯ್ಕೆಗೆ ಅಮೆರಿಕ ವಿರೋಧ ವ್ಯಕ್ತಪಡಿಸಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

‘‘ಫಯಾದ್‌ರನ್ನು ವಿಶ್ವಸಂಸ್ಥೆಯ ರಾಯಭಾರಿ ಹುದ್ದೆಗೆ ನೇಮಿಸಲು ನನಗೆ ಸಾಧ್ಯವಾಗುತ್ತಿಲ್ಲ. ಇದು ಲಿಬಿಯ ಶಾಂತಿ ಪ್ರಕ್ರಿಯೆ ಮತ್ತು ಲಿಬಿಯದ ಜನರ ಸೋಲಾಗಿದೆ’’ ಎಂದು ಗುಟರಸ್ ಇಲ್ಲಿ ನಡೆದ ಸಮ್ಮೇಳನವೊಂದರಲ್ಲಿ ತಿಳಿಸಿದರು.

‘‘ಈ ಕೆಲಸಕ್ಕೆ ಅತ್ಯಂತ ಸಮರ್ಥನಾಗಿರುವ ವ್ಯಕ್ತಿಯನ್ನು ನಿವಾರಿಸಲು ಸರಿಯಾದ ಕಾರಣವಿದೆ ಎಂದು ನನಗೆ ಅನಿಸುವುದಿಲ್ಲ. ಈ ಹುದ್ದೆಗೆ ಸಾಮರ್ಥ್ಯ ಅತ್ಯಂತ ಮುಖ್ಯವಾಗಿದೆ’’ ಎಂದು ಹೇಳಿದ ಅವರು, ಲಿಬಿಯ ಬಿಕ್ಕಟ್ಟನ್ನು ಕೊನೆಗೊಳಿಸುವುದು ಪ್ರತಿಯೊಬ್ಬರ ಹಿತದೃಷ್ಟಿಯಿಂದ ಮುಖ್ಯವಾಗಿದೆ ಎಂದರು.

ರಾಜಕೀಯ ಪರಿಹಾರಕ್ಕೆ ಎಲ್ಲ ನೆರವು :ಗುಟರಸ್ ವಾಗ್ದಾನ

ಯಮನ್‌ನ ಸಂಘರ್ಷನಿರತ ಬಣಗಳು ರಾಜಿಯಾಗಲು ಒಪ್ಪಿದರೆ ಹಾಗೂ ವಿಶ್ವಸಂಸ್ಥೆಯ ನಿರ್ಣಯಗಳು ಮತ್ತು ಜಿಸಿಸಿ ಮಧ್ಯಸ್ಥಿಕೆಯ ಉಪಕ್ರಮಗಳ ಚೌಕಟ್ಟಿನಲ್ಲಿ ಬಿಕ್ಕಟ್ಟಿಗೆ ರಾಜಕೀಯ ಪರಿಹಾರವೊಂದನ್ನು ಕಂಡುಹಿಡಿಯಲು ಮುಂದಾದರೆ ಎಲ್ಲ ನೆರವನ್ನು ನೀಡುವುದಾಗಿ ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೊ ಗುಟರಸ್ ಹೇಳಿದ್ದಾರೆ.

ಅದೇ ವೇಳೆ, ಯಮನ್‌ನಲ್ಲಿ ಶಾಂತಿ ಏರ್ಪಡಿಸಲು ವಿಶ್ವಸಂಸ್ಥೆಯ ಪ್ರತಿನಿಧಿ ಇಸ್ಮಾಯಿಲ್ ಔಲ್ಡ್ ಶೇಖ್ ಅಹ್ಮದ್ ನಡೆಸುತ್ತಿರುವ ಪ್ರಯತ್ನಗಳಿಗೆ ವಿಶ್ವಸಂಸ್ಥೆಯ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News