×
Ad

ಥರ್ಡ್ ಅಂಪೈರ್‌ಅನ್ನೇ ಔಟ್ ಮಾಡಿದ ಕೊಹ್ಲಿ!

Update: 2017-02-13 23:13 IST

 ಹೈದರಾಬಾದ್, ಫೆ.13: ಭಾರತದ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ರನ್ ಗಳಿಸುವುದರಲ್ಲಿ, ದಕ್ಷ ನಾಯಕತ್ವದಲ್ಲಿ ಮಾತ್ರ ನಿಪುಣರಲ್ಲ, ಅಂಪೈರ್ ತೀರ್ಪು ಪರಾಮರ್ಶೆ(ಡಿಆರ್‌ಎಸ್) ಪದ್ಧತಿಯನ್ನು ಚೆನ್ನಾಗಿ ಬಳಸಿಕೊಳ್ಳುವುದರಲ್ಲೂ ಚಾಣಾಕ್ಷರಾಗಿದ್ದಾರೆ. ಕೊಹ್ಲಿ ಕಡಿಮೆ ಅವಧಿಯಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಡಿಆರ್‌ಎಸ್‌ನ್ನು ತಂಡದ ಹಿತಕ್ಕೆ ಬಳಸಿಕೊಳ್ಳುವ ಕಲೆಯನ್ನು ತನ್ನದಾಗಿಸಿಕೊಂಡಿದ್ದಾರೆ.

 ಕೊಹ್ಲಿ ಡಿಆರ್‌ಎಸ್ ಪದ್ಧತಿಯ ಮೊರೆ ಹೋದಾಗ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ವೃದ್ಧಿಮಾನ್ ಸಹಾ ನೆರವಿಗೆ ಬರುತ್ತಾರೆ. ಆದರೆ, ಬಾಂಗ್ಲಾದೇಶ ವಿರುದ್ಧದ ಏಕೈಕ ಟೆಸ್ಟ್‌ನ ಅಂತಿಮ ದಿನವಾದ ಸೋಮವಾರ ಬಾಂಗ್ಲಾದೇಶದ 2ನೆ ಇನಿಂಗ್ಸ್‌ನ ಅಂತಿಮ ವಿಕೆಟ್ ಪಡೆಯುವಾಗ ಯಾವ ನೆರವು ಪಡೆಯದೇ ಡಿಆರ್‌ಎಸ್ ಮೊರೆ ಹೋಗಿ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟರು.

ಭಾರತಕ್ಕೆ ಅಂತಿಮ ದಿನವಾದ ಸೋಮವಾರ ಭಾರತ ಗೆಲುವಿಗೆ 7 ವಿಕೆಟ್‌ಗಳ ಅಗತ್ಯವಿತ್ತು. ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದ್ದ ಕಾರಣ ಬಾಂಗ್ಲಾ ಟೆಸ್ಟ್ ಡ್ರಾಗೊಳಿಸುವ ಪ್ರಯತ್ನದಲ್ಲಿತ್ತು. ಆದರೆ, ಪಂದ್ಯದಲ್ಲಿ ಸ್ಪಷ್ಟ ಫಲಿತಾಂಶ ಬರುವ ಸಾಧ್ಯತೆ ನಿಚ್ಚಳವಾಗಿತ್ತು.

  ಇನಿಂಗ್ಸ್‌ನ 101ನೆ ಓವರ್‌ನಲ್ಲಿ ಆರ್.ಅಶ್ವಿನ್ ಬಾಂಗ್ಲಾದ ಬಾಲಂಗೋಚಿ ತಸ್ಕಿನ್ ಅಹ್ಮದ್ ವಿರುದ್ಧ ಕ್ಯಾಚ್ ಔಟ್‌ಗಾಗಿ ಮನವಿ ಮಾಡಿದರು. ಗೊಂದಲಕ್ಕೆ ಸಿಲುಕಿದ ಅಂಪೈರ್, ಟಿವಿ ಅಂಪೈರ್ ಮೊರೆ ಹೋದರು. ಫೀಲ್ಡರ್ ಚೆಂಡನ್ನು ಕ್ಯಾಚ್ ಪಡೆದಿದ್ದರೂ ವಿಡಿಯೋ ರಿಪ್ಲೇಯಲ್ಲಿ ಚೆಂಡು ಬ್ಯಾಟ್‌ಗೆ ತಾಗದೇ ಇರುವುದನ್ನು ತೋರಿಸುತ್ತಿತ್ತು. ಮೂರನೆ ಅಂಪೈರ್ 'ನಾಟೌಟ್' ತೀರ್ಪು ನೀಡಿದರು. ಆದರೆ, ಕೊಹ್ಲಿಯ ಮನಸ್ಸಲ್ಲಿ ಬೇರೆಯೇ ಯೋಚನೆ ಹೊಳೆಯುತ್ತಿತ್ತು.

 ಭಾರತದ ನಾಯಕ ಕೊಹ್ಲಿ ತಕ್ಷಣವೇ 'ಟಿ'ಸಂಕೇತವನ್ನು ಪ್ರದರ್ಶಿಸಿ ಡಿಆರ್‌ಎಸ್ ಮೊರೆ ಹೋದರು. ಕ್ಯಾಚ್ ಔಟ್‌ನ್ನು ಅದಾಗಲೇ ತಿರಸ್ಕರಿಸಿದ ಕಾರಣ ಅವರು ಲೆಗ್‌ಬಿಫೋರ್ ವಿಕೆಟ್‌ಗಾಗಿ ಮನವಿ ಮಾಡಿದರು. ಆಗ ಅಂಪೈರ್ ಎಲ್‌ಬಿಡಬು ತೀರ್ಪು ನೀಡಿ ಬ್ಯಾಟ್ಸ್‌ಮನ್‌ನನ್ನು ಔಟ್ ಮಾಡಿದರು. ಕೊಹ್ಲಿ ಡಿಆರ್‌ಎಸ್ ಮೊರೆ ಹೋಗಿದ್ದು ಫಲ ನೀಡಿತು. ಕೊಹ್ಲಿ ಅವರು ಅಂಪೈರ್ ಹಾಗೂ ಮೂರನೆ ಅಂಪೈರ್‌ಗಳ ನಿರ್ಧಾರವನ್ನೇ ತಿರುಗು-ಮುರುಗು ಮಾಡಿ ಅವರಿಬ್ಬರನ್ನು ಔಟ್ ಮಾಡಿದರು!

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News