ವಾಯುಮಾಲಿನ್ಯ: ಜಾಗತಿಕ ಸಾವಿನ ಅರ್ಧದಷ್ಟು ಭಾರತ, ಚೀನಾದಲ್ಲಿ
ಶಾಂೈ, ಫೆ. 14: 2015ರಲ್ಲಿ ವಾಯುಮಾಲಿನ್ಯ ಕಾರಣದಿಂದ ಸಂಭವಿಸಿದ ಜಾಗತಿಕ ಸಾವುಗಳ ಪೈಕಿ ಅರ್ಧದಷ್ಟು ಸಾವುಗಳು ಭಾರತ ಮತ್ತು ಚೀನಾಗಳಲ್ಲಿ ಸಂಭವಿಸಿವೆ ಎಂದು ಮಂಗಳವಾರ ಪ್ರಕಟಗೊಂಡ ಅಧ್ಯಯನವೊಂದು ತಿಳಿಸಿದೆ.
ವಾಯುಮಾಲಿನ್ಯವು 2015ರಲ್ಲಿ ಜಗತ್ತಿನಾದ್ಯಂತ 42 ಲಕ್ಷಕ್ಕೂ ಅಧಿಕ ಅಕಾಲಿಕ ಸಾವುಗಳಿಗೆ ಕಾರಣವಾಗಿದೆ ಹಾಗೂ ಈ ಪೈಕಿ ಸುಮಾರು 22 ಲಕ್ಷ ಸಾವುಗಳು ಭಾರತ ಮತ್ತು ಚೀನಾಗಳಲ್ಲಿ ಸಂಭವಿಸಿವೆ ಎಂದು ಅಮೆರಿಕದ ಹೆಲ್ತ್ ಇಫೆಕ್ಟ್ಸ್‌ಇನ್‌ಸ್ಟಿಟ್ಯೂಟ್ (ಎಚ್‌ಇಐ) ನಡೆಸಿದ ಸಂಶೋಧನೆ ತಿಳಿಸಿದೆ. ಇದರೊಂದಿಗೆ ವಾಯುಮಾಲಿನ್ಯವು ಸಾವಿನ ಐದನೆ ಅತಿ ದೊಡ್ಡ ಕಾರಣವಾಗಿದೆ.
ಜಾಗತಿಕ ಜನಸಂಖ್ಯೆಯ 92 ಶೇಕಡ ಜನರು ಅನಾರೋಗ್ಯಕರ ವಾಯು ಇರುವ ಸ್ಥಳಗಳಲ್ಲಿ ವಾಸಿಸುತ್ತಿದ್ದಾರೆ ಎಂದೂ ಅದು ಹೇಳಿದೆ. ಆರೋಗ್ಯದ ಮೇಲೆ ಮಾಲಿನ್ಯದ ಜಾಗತಿಕ ಪರಿಣಾಮವನ್ನು ತೋರಿಸುವ ಆನ್‌ಲೈನ್ ಮಾಹಿತಿಕೋಶವೊಂದನ್ನೂ ಎಚ್‌ಇಐ ಆರಂಭಿಸಿದೆ.
ವಾಯುಮಾಲಿನ್ಯವು ಹೆಚ್ಚಿನ ಪ್ರಮಾಣದಲ್ಲಿ ಕ್ಯಾನ್ಸರ್, ಪಕ್ಷವಾತ ಮತ್ತು ಹೃದಯದ ಕಾಯಿಲೆಗಳು ಹಾಗೂ ಅಸ್ತಮಾ ಮುಂತಾದ ಉಸಿರಾಟದ ಕಾಯಿಲೆಗಳಿಗೆ ಕಾರಣವಾಗುತ್ತದೆ.
ಭಾರತ ಮತ್ತು ಚೀನಾಗಳಲ್ಲಿ ತಲಾ 11 ಲಕ್ಷ ಸಾವುಗಳು ಸಂಭವಿಸಿವೆ ಎಂದು ಹೇಳಿರುವ ವರದಿ, ಆದರೆ, ಕ್ರಮ ತೆಗೆದುಕೊಳ್ಳುವ ವಿಷಯದಲ್ಲಿ ಚೀನಾ ಭಾರತಕ್ಕಿಂತ ಮುಂದಿದೆ ಎಂದಿದೆ.
‘‘ಭಾರತ ಕ್ರಮಿಸಬೇಕಾದ ದಾರಿ ಉದ್ದವಿದೆ. ಸಾಕಷ್ಟು ಪ್ರಮಾಣದಲ್ಲಿ ಪುರಾವೆಗಳು ಲಭ್ಯವಿದ್ದರೂ, ವಾಯುಮಾಲಿನ್ಯ ಮತ್ತು ಸಾವುಗಳಿಗೆ ಸಂಬಂಧವಿಲ್ಲ ಎಂದು ಹೇಳುವ ಕೆಲವು ಸಚಿವರು ಭಾರತದಲ್ಲಿರುವಂತೆ ಕಾಣುತ್ತಿದೆ’’ ಎಂದು ಎಚ್‌ಇಐ ಅಧ್ಯಕ್ಷ ಡಾನ್ ಗ್ರೀನ್‌ಬಾಮ್ ‘ರಾಯ್ಟರ್ಸ್’ ಸುದ್ದಿ ಸಂಸ್ಥೆಗೆ ತಿಳಿಸಿದರು.