×
Ad

ಒರೊವಿಲ್ ಅಣೆಕಟ್ಟೆ ನಿರಾಶ್ರಿತರಿಗೆ ಆಹಾರ, ಆಶ್ರಯ ನೀಡಲು ಭಾರತೀಯ ಅಮೆರಿಕನ್ನರು ಮುಂದು

Update: 2017-02-14 22:41 IST

ವಾಶಿಂಗ್ಟನ್, ಫೆ. 14: ಉತ್ತರ ಕ್ಯಾಲಿಫೋರ್ನಿಯದಲ್ಲಿರುವ ಬೃಹತ್ ಒರೊವಿಲ್ ಅಣೆಕಟ್ಟೆಯ ಕುಸಿತ ಭೀತಿಯ ಹಿನ್ನೆಲೆಯಲ್ಲಿ ಸ್ಥಳಾಂತರಗೊಂಡಿರುವ ಯೂಬನಗರದ ನಿವಾಸಿಗಳಿಗೆ ಊಟ ಮತ್ತು ಆಶ್ರಯ ನೀಡಲು ಕ್ಯಾಲಿಫೋರ್ನಿಯದ ರಾಜಧಾನಿ ಸ್ಯಾಕ್ರಮೆಂಟೊದಲ್ಲಿರುವ ಹಲವಾರು ಗುರುದ್ವಾರಗಳು ಮುಂದೆ ಬಂದಿವೆ.

ಸ್ಯಾಕ್ರಮೆಂಟೊದಿಂದ ಸುಮಾರು 104 ಕಿಲೋಮೀಟರ್ ದೂರದಲ್ಲಿರುವ ಲೇಕ್ ಒರೊವಿಲ್ ಅಣೆಕಟ್ಟೆಯ ಕೆಳಗಿನ ನದಿ ಕಣಿವೆಯ ಸುಮಾರು 1.88 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಈ ಪೈಕಿ ಸುಮಾರು 20,000 ಮಂದಿ ಭಾರತೀಯ ಅಮೆರಿಕನ್ನರಿದ್ದಾರೆ.

ಯೂಬ ನಗರದ ಜನಸಂಖ್ಯೆಯ ಸುಮಾರು 13 ಶೇಕಡ ಪಂಜಾಬಿ ಅಮೆರಿಕನ್ನರು. ಹಾಲ್‌ವುಡ್, ಮ್ಯಾರಿಸ್‌ವಿಲ್, ಆಲಿವ್‌ಹರ್ಸ್ಟ್, ಲಿಂಡ ಮತ್ತು ಪ್ಲೂಮಾಸ್ ಲೇಕ್‌ಗಳನ್ನು ಒಳಗೊಂಡ ಯೂಬ ಕೌಂಟಿಯ ಹಲವು ಭಾಗಗಳ ಜನರನ್ನು ತೆರವುಗೊಳಿಸಲು ಆದೇಶಿಸಲಾಗಿದೆ.

ಇದಾದ ಹಲವು ಗಂಟೆಗಳ ಬಳಿಕ, ಅಣೆಕಟ್ಟಿನ ನೀರಿನ ಮಟ್ಟದಲ್ಲಿ ಇಳಿಕೆ ಕಂಡುಬಂದಿದ್ದು, ಅಪಾಯದ ತೀವ್ರತೆಯೂ ಕಡಿಮೆಯಾಗಿದೆ.

‘‘ಸ್ಯಾಕ್ರಮೆಂಟೊದಲ್ಲಿರುವ ಸಿಖ್ ದೇವಾಲಯಗಳು ಆಹಾರ ಮತ್ತು ಆಶ್ರಯ ನೀಡುತ್ತಿವೆ. ಯೂಬ ನಗರದಿಂದ ಸ್ಥಳಾಂತರಗೊಂಡಿರುವ ಎಲ್ಲರಿಗೆ ಈ ನೆರವು ಮುಕ್ತವಾಗಿದೆ’’ ಎಂದು ಸಾಮಾಜಿಕ ಕಾರ್ಯಕರ್ತ ಹರ್ಜಿಂದರ್ ಎಸ್. ಕುಕ್ರೇಜ ತಿಳಿಸಿದರು.

ಜನರ ಜೀವನಾಡಿಯಾಗಿದ್ದ ಅಣೆಕಟ್ಟೆ ಬೆದರಿಕೆಯ ಮೂಲವಾದಾಗ

ಉತ್ತರ ಕ್ಯಾಲಿಫೋರ್ನಿಯದ ಹಲವು ಪಟ್ಟಣಗಳ ಜನರ ಜೀವನಾಡಿಯಾಗಿದ್ದ ಒರೊವಿಲ್‌ನಲ್ಲಿರುವ ಬೃಹತ್ ಜಲಾಶಯವು ಈಗ ಅವರಿಗೆ ಅತಿ ದೊಡ್ಡ ಬೆದರಿಕೆಯಾಗಿ ಪರಿಣಮಿಸಿದೆ.

ಅಣೆಕಟ್ಟೆಯ ದ್ವಾರವು ಬಿರುಕುಬಿಟ್ಟಿದ್ದು ಯಾವುದೇ ಕ್ಷಣದಲ್ಲಿ ಕುಸಿಯುವ ಸಾಧ್ಯತೆಯಿದೆ. ಒಂದು ವೇಳೆ, ಹಾಗೆ ಆದರೆ ಗೋಡೆಯೋಪಾದಿಯಲ್ಲಿ ನೀರು ಸುತ್ತಲಿನ ಪಟ್ಟಣಗಳಿಗೆ ಧಾವಿಸಲಿದೆ. ಹಾಗಾಗಿ, ಸುಮಾರು 2 ಲಕ್ಷ ಮಂದಿಯನ್ನು ರವಿವಾರ ಇಲ್ಲಿ ಸ್ಥಳಾಂತರಿಸಲಾಗಿದೆ.

ಗುರುವಾರ ಹೆಚ್ಚಿನ ಮಳೆ ಬರುವ ನಿರೀಕ್ಷೆಯಿದ್ದು, ಅದರ ಒಳಗಾಗಿ ಅಣೆಕಟ್ಟನ್ನು ದುರಸ್ತಿಗೊಳಿಸಲು ಅಧಿಕಾರಿಗಳು ಹೆಣಗಾಡುತ್ತಿದ್ದಾರೆ. ಹಾಗಾಗಿ, ಇಲ್ಲಿಂದ ಸ್ಥಳಾಂತರಗೊಂಡ ಜನರು ತಮ್ಮ ಮನೆಗಳಿಗೆ ವಾಪಸ್ ಹೋಗಲು ಅನಿರ್ದಿಷ್ಟಾವಧಿ ಅವಧಿ ಕಾಯಬೇಕಾಗಿದೆ.

‘‘ಇಂಥದೊಂದು ಘಟನೆ ನಡೆಯಬಹುದೆಂದು ನಾವು ನಮ್ಮ ಜೀವಮಾನದಲ್ಲಿ ಎಂದಿಗೂ ಯೋಚಿಸಿರಲಿಲ್ಲ’’ ಎಂದು 16,000 ಜನಸಂಖ್ಯೆಯಿರುವ ಒರೊವಿಲ್ ಪಟ್ಟಣದ ನಿವಾಸಿಯೊಬ್ಬರು ಹೇಳುತ್ತಾರೆ. ಅವರು ಈ ಪಟ್ಟಣದಲ್ಲಿ ಐದು ವರ್ಷಗಳಿಂದ ವಾಸಿಸುತ್ತಿದ್ದಾರೆ.

770 ಅಡಿ ಎತ್ತರದ ಈ ಅಣೆಕಟ್ಟು ಅಮೆರಿಕದ ಅತ್ಯಂತ ಬೃಹತ್ ಅಣೆಕಟ್ಟಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News