ಮಾನಸಿಕ ಅಸ್ವಸ್ಥತೆ: ರಾಷ್ಟ್ರೀಯ ನೀತಿ ರೂಪಿಸಲು ಕೇಂದ್ರಕ್ಕೆ ಸುಪ್ರೀಂ ಸೂಚನೆ
ಹೊಸದಿಲ್ಲಿ, ಫೆ.14: ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವವರು ಹಾಗೂ ಈ ಸಮಸ್ಯೆಗೆ ಒಳಗಾಗಿ ಚಿಕಿತ್ಸೆ ಪಡೆದು ಗುಣಮುಖರಾದವರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸುವ ಕುರಿತು ಸೂಕ್ತ ರಾಷ್ಟ್ರೀಯ ನೀತಿಯೊಂದನ್ನು ರೂಪಿಸುವಂತೆ ಕೇಂದ್ರ ಸರಕಾರಕ್ಕೆ ಸುಪ್ರೀಂಕೋರ್ಟ್ ಸೂಚಿಸಿದೆ. ಈ ವಿಷಯವು ಸಂವಿಧಾನದ ಸಮಕಾಲೀನ ಪಟ್ಟಿಯಲ್ಲಿರುವ ಕಾರಣ ಕೇಂದ್ರ ಸರಕಾರ ಕೂಡಾ ಕಾಯ್ದೆಯನ್ನು ರೂಪಿಸುವ ಅಧಿಕಾರ ಹೊಂದಿದೆ ಎಂದು ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ಅವರನ್ನೊಳಗೊಂಡ ವಿಭಾಗೀಯ ಪೀಠವೊಂದು ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಸೂಚಿಸಿದೆ.
ಮಾನಸಿಕ ಅಸ್ವಸ್ಥತೆ ನೀಗಿ ಗುಣಮುಖರಾದರೂ ಇನ್ನೂ ಆಸ್ಪತ್ರೆಯಲ್ಲೇ ಅಸಹಾಯಕರಾಗಿ ದಿನದೂಡುತ್ತಿರುವ ಸುಮಾರು 300 ಮಂದಿ ಉತ್ತರಪ್ರದೇಶದ ವಿವಿಧ ಮಾನಸಿಕ ಚಿಕಿತ್ಸಾಲಯಗಳಲ್ಲಿದ್ದು ಇವರಲ್ಲಿ ಹೆಚ್ಚಿನವರು ಬಡ ಕುಟುಂಬಕ್ಕೆ ಸೇರಿದವರು. ಇಂತಹ ವ್ಯಕ್ತಿಗಳನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸುವ ಬಗ್ಗೆ ಯಾವುದೇ ನೀತಿ, ನಿಯಮಗಳಿಲ್ಲದ ಕಾರಣ ಆಸ್ಪತ್ರೆಯವರು ಏನೂ ಮಾಡುವಂತಿಲ್ಲ. ಆದ್ದರಿಂದ ಈ ಕುರಿತು ರಾಷ್ಟ್ರೀಯ ನೀತಿಯೊಂದನ್ನು ರಚಿಸುವಂತೆ ಕೇಂದ್ರ ಸರಕಾರಕ್ಕೆ ಸೂಚಿಸಬೇಕು ಎಂದು ಕೋರಿ ವಕೀಲ ಜಿ.ಕೆ.ಬನ್ಸಾಲ್ ಎಂಬವರು ಸುಪ್ರೀಂಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸಿದ್ದರು.
ಈ ಕುರಿತು ರಾಷ್ಟ್ರೀಯ ನೀತಿಯನ್ನು ಅಂತಿಮಗೊಳಿಸಲು ಕೇಂದ್ರ ಸರಕಾರ ಸಹಕಾರ ನೀಡಬೇಕು ಎಂದು ಸುಪ್ರೀಂಕೋರ್ಟ್‌ನ ವಿಭಾಗೀಯ ಪೀಠ ತಿಳಿಸಿದೆ.