ನಾನು ಯಾವುದೇ ಜೈಲಿನಲ್ಲಿದ್ದರೂ ನನ್ನ ಮನಸ್ಸು ತಮಿಳುನಾಡಿನಲ್ಲಿರುತ್ತದೆ : ಶಶಿಕಲಾ
ಚೆನ್ನೈ, ಫೆ. 14: ನಾನು ಯಾವುದೇ ಜೈಲಿನಲ್ಲಿದ್ದರೂ ನನ್ನ ಮನಸ್ಸು ತಮಿಳುನಾಡಿನಲ್ಲಿರುತ್ತದೆ. ರಾಜ್ಯದ ಶ್ರೇಯೋಭಿವೃದ್ಧಿಗಾಗಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿ ಎಂದು ಎಐಎಡಿಎಂಕೆ ಅಧಿನಾಯಕಿ ಶಶಿಕಲಾ ನಟರಾಜನ್ ಕರೆ ನೀಡಿದ್ದಾರೆ.
ಗೋಲ್ಡನ್ ಬೇ ರೆಸಾರ್ಟ್‌ನಲ್ಲಿ ಶಾಸಕರ ಸಭೆ ನಡೆಸಿದ ಬಳಿಕ ಮಾತನಾಡಿದ ಶಶಿಕಲಾ "ನನ್ನೊಬ್ಬಳನ್ನು ಮಾತ್ರ ಜೈಲಿಗೆ ಕಳುಹಿಸಲು ಸಾಧ್ಯವಿದೆ. ಆದರೆ ಜನರ ಮೇಲಿನ ಪ್ರೀತಿ ವಿಶ್ವಾಸವನ್ನು ಬಂಧನದಲ್ಲಿಡಲು ಅಸಾಧ್ಯ" ಎಂದು ಹೇಳಿದರು.
ಖಾಲಿ ಖಾಲಿ: ಒಂದು ವಾರದಿಂದ ರೆಸಾರ್ಟ್‌ನಲ್ಲಿ ಠಿಕಾಣಿ ಹೂಡಿದ್ದ ಶಶಿಕಲಾ ಬಣದ ಶಾಸಕರು ಶಶಿಕಲಾ ಅವರು ರೆಸಾರ್ಟ್‌ನಿಂದ ಹೊರಡುತ್ತಿದ್ದಂತೆ ಅವರನ್ನೇ ಹಿಂಬಾಲಿಸಿದರು. ಶಶಿಕಲಾ ಅವರು ಪೋಯಸ್ ಗಾರ್ಡನ್ ಮನೆಗೆ ವಾಪಸಾಗಿದ್ದಾರೆ. ಅವರು ರೆಸಾರ್ಟ್‌ನಿಂದ ನಿರ್ಗಮಿಸಿದ ಹಿನ್ನೆಲೆಯಲ್ಲಿ ರೆಸಾರ್ಟ್ ಖಾಲಿ ಖಾಲಿಯಾಗಿದೆ.
ಯಾರೂ ಭಯಪಡಬೇಡಿ: ಯಾವುದೇ ಶಕ್ತಿ ಬಂದರೂ ಪಕ್ಷವನ್ನು ಅಲುಗಾಡಿಸಲು ಸಾಧ್ಯವಿಲ್ಲ. ಯಾರೂ ಸಹ ಭಯಪಡಬೇಡಿ. ಜಯಲಲಿತಾ ಆಶೀರ್ವಾದ ನಮಗೆ ಸದಾ ಇದ್ದೇ ಇರುತ್ತದೆ " ಪೋಯಸ್ ಗಾರ್ಡನ್ ತಲುಪಿದ ಶಶಿಕಲಾ ಕಾರ್ಯಕರ್ತರಿಗೆ ಧೈರ್ಯ ತುಂಬಿದರು.