ಐಪಿಎಲ್ ಹರಾಜು ಪಟ್ಟಿಯಲ್ಲಿ 351 ಆಟಗಾರರು
ಹೊಸದಿಲ್ಲಿ, ಫೆ.14: ಹತ್ತನೆ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)-2017ಕ್ಕೆ 351 ಆಟಗಾರರು ಹರಾಜು ಪಟ್ಟಿಯಲ್ಲಿದ್ದಾರೆ ಎಂದು ಐಪಿಎಲ್ ಆಡಳಿತ ಮಂಡಳಿ ಮಂಗಳವಾರ ದೃಢಪಡಿಸಿದೆ.
799 ಆಟಗಾರರ ಹೆಸರು ಹರಾಜಿಗೆ ನೋಂದಣಿಯಾಗಿದ್ದು, ಅಂತಿಮ ಪಟ್ಟಿಯಲ್ಲಿ 351 ಆಟಗಾರರನ್ನು ಉಳಿಸಿಕೊಳ್ಳಲಾಗಿದೆ. ಇದರಲ್ಲಿ ಅಸೋಸಿಯೇಟ್ ದೇಶಗಳ ಆರು ಆಟಗಾರರು ಸೇರಿದಂತೆ(ಅಫ್ಘಾನಿಸ್ತಾನದ ಐವರು ಹಾಗೂ ಯುಎಇನ ಓರ್ವ ಆಟಗಾರ) ಒಟ್ಟು 122 ಅಂತಾರಾಷ್ಟ್ರೀಯ ಆಟಗಾರರಿದ್ದಾರೆ.
ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಇಂಗ್ಲೆಂಡ್ ಆಟಗಾರರು ಗಮನ ಸೆಳೆಯಲಿದ್ದಾರೆ. ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್, ಇಯಾನ್ ಮೊರ್ಗನ್ ಹಾಗೂ ಕ್ರಿಸ್ ವೋಕ್ಸ್, ಆಸ್ಟ್ರೇಲಿಯದ ಮಿಚೆಲ್ ಜಾನ್ಸನ್, ಪ್ಯಾಟ್ ಕುಮಿನ್ಸ್ ಹಾಗೂ ಶ್ರೀಲಂಕಾದ ನಾಯಕ ಆ್ಯಂಜೆಲೊ ಮ್ಯಾಥ್ಯೂಸ್ ಮೂಲ ಬೆಲೆ ಗರಿಷ್ಠ 2 ಕೋ.ರೂ. ಹೊಂದಿದ್ದಾರೆ.
ಇಶಾಂತ್ ಶರ್ಮ ಹರಾಜಿನ ಪಟ್ಟಿಯಲ್ಲಿರುವ ಭಾರತದ ಏಕೈಕ ಆಟಗಾರನಾಗಿದ್ದು, 2 ಕೋ.ರೂ. ಮೂಲಬೆಲೆ ಹೊಂದಿದ್ದಾರೆ.
ಇದೇ ಮೊದಲ ಬಾರಿ ಅಫ್ಘಾನಿಸ್ತಾನದ ಅಸ್ಘರ್ ಸ್ಟಾನಿಕ್‌ಝೈ, ಮುಹಮ್ಮದ್ ನಬಿ, ಮುಹಮ್ಮದ್ ಶಹಬಾಝ್, ರಶೀದ್ ಖಾನ್ ಹಾಗೂ ದೌಲತ್ ಝದ್ರಾನ್, ಯುಎಇನ ಚಿರಾಗ್ ಸೂರಿ ಹರಾಜಿನಲ್ಲಿ ಭಾಗವಹಿಸಲಿದ್ದಾರೆ.
ಕಳೆದ ವರ್ಷ 8.5 ಕೋ.ರೂ.ಗೆ ದಿಲ್ಲಿ ಡೇರ್‌ಡೆವಿಲ್ಸ್‌ಗೆ ಹರಾಜಾಗಿದ್ದ ಪವನ್ ನೇಗಿ 30 ಲಕ್ಷ. ರೂ. ಮೂಲಬೆಲೆ ಹೊಂದಿದ್ದಾರೆ. 2018ರ ಋತುವಿನ ಐಪಿಎಲ್‌ನಲ್ಲಿ ಅಸ್ತಿತ್ವದಲ್ಲಿರುವ ಆಟಗಾರರ ಒಪ್ಪಂದ ಕೊನೆಗೊಳ್ಳಲಿದ್ದು, ಹೆಚ್ಚಿನ ಎಲ್ಲ ಆಟಗಾರರು ಮತ್ತೊಮ್ಮೆ ಹರಾಜುಗೊಳ್ಳಲಿದ್ದಾರೆ.
ಆಟಗಾರರನ್ನು ಉಳಿಸಿಕೊಳ್ಳುವ ನಿಯಮ ಹಾಗೂ 2018ರಲ್ಲಿ ಎಷ್ಟು ತಂಡಗಳು ಇರಲಿವೆ ಎಂದು ಐಪಿಎಲ್ ಆಡಳಿತ ಮಂಡಳಿ ಇನ್ನೂ ನಿರ್ಧಾರ ಕೈಗೊಂಡಿಲ್ಲ. ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಎರಡು ವರ್ಷ ನಿಷೇಧ ಎದುರಿಸುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ 2018ರ ಋತುವಿನಲ್ಲಿ ವಾಪಸಾಗುವ ಸಾಧ್ಯತೆಯಿದೆ.
ಐಪಿಎಲ್ ಹರಾಜಿನಲ್ಲಿ ಅಫ್ಘಾನಿಸ್ತಾನದ ಆಟಗಾರರು!
ಕಳೆದ ಒಂದು ವರ್ಷದಿಂದ ಸ್ಥಿರ ಪ್ರದರ್ಶನ ನೀಡುತ್ತಿರುವ ಅಫ್ಘಾನಿಸ್ತಾನಿ ಆಟಗಾರರು ಇದೇ ಮೊದಲ ಬಾರಿ ಐಪಿಎಲ್‌ನಂತಹ ಪ್ರಮುಖ ದೇಶೀಯ ಟ್ವೆಂಟಿ-20 ಟೂರ್ನಿಯಲ್ಲಿ ಗುರುತಿಸಿಕೊಂಡಿದ್ದಾರೆ.
ಮುಂಬರುವ ಐಪಿಎಲ್ ಆಟಗಾರರ ಹರಾಜಿನ ಅಂತಿಮ ಪಟ್ಟಿಯಲ್ಲಿ ಅಫ್ಘಾನ್‌ನ ಐವರು ಆಟಗಾರರು ಸ್ಥಾನ ಪಡೆದಿದ್ದಾರೆ. ಅಫ್ಘಾನ್ ನಾಯಕ ಅಸ್ಘರ್ ಸ್ಟಾನಿಕ್‌ಝೈ, ಸ್ಟಾರ್ ಆಲ್‌ರೌಂಡರ್ ಮುಹಮ್ಮದ್ ನಬಿ, ವಿಕೆಟ್‌ಕೀಪರ್-ಓಪನಿಂಗ್ ಬ್ಯಾಟ್ಸ್‌ಮನ್ ಮುಹಮ್ಮದ್ ಶಹಝಾದ್, ಲೆಗ್ ಸ್ಪಿನ್ನರ್ ರಶೀದ್ ಖಾನ್ ಹಾಗೂ ವೇಗದ ಬೌಲರ ದೌಲತ್ ಝದ್ರಾನ್ ಅಂತಿಮ ಹರಾಜು ಪಟ್ಟಿಯಲ್ಲಿದ್ದಾರೆ.
ಅಫ್ಘಾನ್ ಆಟಗಾರರಲ್ಲದೆ ಇನ್ನೊಬ್ಬ ಅಸೋಸಿಯೇಟ್ ತಂಡದ ಹರಾಜಿನಲ್ಲಿದ್ದಾರೆ. ಅವರೇ ಯುಎಇ ತಂಡದ ಬ್ಯಾಟ್ಸ್‌ಮನ್ ಚಿರಾಗ್ ಸೂರಿ. ಆರು ಅಸೋಸಿಯೇಟ್ ಕ್ರಿಕೆಟಿಗರ ಪೈಕಿ ಶಹಝಾದ್ ಹಾಗೂ ರಶೀದ್ ಗರಿಷ್ಠ ಮೂಲ ಬೆಲೆ 50 ಲಕ್ಷ ರೂ. ಹೊಂದಿದ್ದಾರೆ. ಈ ವರ್ಷದ ಐಪಿಎಲ್ ಹರಾಜು ಪ್ರಕ್ರಿಯೆ ಫೆ.20 ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಎಲ್ಲ 8 ಫ್ರಾಂಚೈಸಿಗಳು ತಮ್ಮ ಇಷ್ಟದ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲಿವೆ.