×
Ad

.ಸಿನೆಮಾದಲ್ಲಿ ರಾಷ್ಟ್ರಗೀತೆ ಪ್ರಸಾರದ ದೃಶ್ಯ ಇದ್ದರೆ ಎದ್ದುನಿಲ್ಲುವ ಅಗತ್ಯವಿಲ್ಲ: ಸುಪ್ರೀಂ ಸ್ಪಷ್ಟನೆ

Update: 2017-02-14 23:41 IST

ಫೆ.14: ಸಿನೆಮಾದ ದೃಶ್ಯವೊಂದರಲ್ಲಿ ರಾಷ್ಟ್ರಗೀತೆ ಪ್ರಸಾರ ಆಗುವಾಗ ವೀಕ್ಷಕರು ಎದ್ದುನಿಲ್ಲುವ ಅಗತ್ಯವಿಲ್ಲ ಎಂದು ಸುಪ್ರೀಂಕೋರ್ಟ್ ತಿಳಿಸಿದೆ. ಸಿನೆಮಾದ ಚಿತ್ರಕಥೆಯ ಪ್ರಕಾರ ಸಿನೆಮಾದ ದೃಶ್ಯವೊಂದರಲ್ಲಿ ರಾಷ್ಟ್ರಗೀತೆ ಪ್ರಸಾರವಾಗುತ್ತಿರುವಾಗ ವೀಕ್ಷಕರು ಎದ್ದುನಿಲ್ಲಬೇಕಿಲ್ಲ. ಅಲ್ಲದೆ ವಾರ್ತಾಚಿತ್ರ ಅಥವಾ ಸಾಕ್ಷಚಿತ್ರದಲ್ಲಿ ರಾಷ್ಟ್ರಗೀತೆ ಪ್ರಸಾರವಾಗುತ್ತಿರುವಾಗ ಸಿನೆಮಾ ವೀಕ್ಷಕರೂ ಜೊತೆಯಲ್ಲಿ ಹಾಡುವುದು ಕಡ್ಡಾಯವೇನಲ್ಲ ಎಂದು ಸುಪ್ರೀಂಕೋರ್ಟ್ ತಿಳಿಸಿದೆ. ಸಿನೆಮಾ ಮಂದಿರಗಳಲ್ಲಿ ಸಿನೆಮಾ ಪ್ರದರ್ಶನ ಆರಂಭದ ಮೊದಲು ರಾಷ್ಟ್ರಗೀತೆ ಪ್ರಸಾರ ಕಡ್ಡಾಯ ಎಂಬ ತನ್ನ ಈ ಹಿಂದಿನ ಆದೇಶದ ಬಗ್ಗೆ ಸ್ಪಷ್ಟನೆ ಕೋರಿ ಎನ್‌ಜಿಒ ಸಂಸ್ಥೆಯೊಂದರ ಮುಖ್ಯಸ್ಥ ಶ್ಯಾಮ್‌ನಾರಾಯಣ್ ಚೌಕ್ಸೆ ಎಂಬವರು ಸಲ್ಲಿಸಿದ್ದ ಮನವಿಯ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಸ್ಪಷ್ಟನೆ ನೀಡಿದೆ. ದೇಶದಾದ್ಯಂತ ಸಿನೆಮಾ ಮಂದಿರಗಳಲ್ಲಿ ಸಿನೆಮಾ ಪ್ರದರ್ಶನದ ಮೊದಲು ರಾಷ್ಟ್ರಗೀತೆಯನ್ನು ಕಡ್ಡಾಯವಾಗಿ ಪ್ರಸಾರ ಮಾಡಬೇಕು ಮತ್ತು ಈ ಸಂದರ್ಭ ವೀಕ್ಷಕರು ಎದ್ದುನಿಂತು ಗೌರವ ಸಲ್ಲಿಸಬೇಕು ಎಂದು ಸುಪ್ರೀಂಕೋರ್ಟ್ 2016ರ ನ.30ರಂದು ಆದೇಶ ನೀಡಿತ್ತು. ಇದನ್ನು ಪಾಲಿಸಿಲ್ಲ ಎಂಬ ಕಾರಣಕ್ಕೆ ವೀಕ್ಷಕರ ಮೇಲೆ ಹಲ್ಲೆ ನಡೆಸಲಾದ ಘಟನೆಯೂ ಕೆಲವೆಡೆ ನಡೆದಿತ್ತು. ಅಷ್ಟೇ ಅಲ್ಲ, ಸಿನೆಮಾದ ದೃಶ್ಯವೊಂದರಲ್ಲಿ ರಾಷ್ಟ್ರಗೀತೆ ಪ್ರಸಾರ ಆಗುತ್ತಿದ್ದಾಗ (ದಂಗಲ್ ಹಿಂದಿ ಸಿನೆಮಾದ ದೃಶ್ಯ) ಎದ್ದು ನಿಲ್ಲಲಿಲ್ಲ ಎಂದು ವೀಕ್ಷಕರಿಗೆ ಹಲ್ಲೆ ನಡೆಸಿದ, ಸಿನೆಮಾ ಮಂದಿರದಲ್ಲಿ ಸಾಕ್ಷಚಿತ್ರ ಪ್ರಸಾರವಾಗುತ್ತಿದ್ದ ಸಂದರ್ಭ ರಾಷ್ಟ್ರಗೀತೆ ಪ್ರಸಾರವಾದಾಗ ಎದ್ದು ನಿಲ್ಲದ ಕಾರಣಕ್ಕೆ ಹಲ್ಲೆ - ಇತ್ಯಾದಿ ಅತಿರೇಕದ ಘಟನೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಶ್ಯಾಮ್‌ನಾರಾಯಣ್ ಸುಪ್ರೀಂಕೋರ್ಟ್ ಆದೇಶದ ಕುರಿತು ಸ್ಪಷ್ಟನೆ ಕೋರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News