×
Ad

ವಾಯವ್ಯ ಪಾಕ್‌ನಲ್ಲಿ ಆತ್ಮಹತ್ಯಾ ದಾಳಿಗೆ ಆರು ಬಲಿ

Update: 2017-02-15 21:00 IST

ಸಿಯೋಲ್,ಫೆ.15: ವಾಯವ್ಯ ಪಾಕಿಸ್ತಾನದ ಪ್ರಕ್ಷುಬ್ಧ ಬುಡಕಟ್ಟು ಪ್ರಾಂತವೊಂದರಲ್ಲಿ ಬುಧವಾರ ಸರಕಾರಿ ಕಾಲೊನಿಯೊಂದರ ಮೇಲೆ ಶಂಕಿತ ತಾಲಿಬಾನ್ ಬಂಡುಕೋರರು ನಡೆಸಿದ ಆತ್ಮಹತ್ಯಾ ದಾಳಿಯಲ್ಲಿ ನಾಲ್ವರು ಭದ್ರತಾ ಸಿಬ್ಬಂದಿ ಸಹಿತ ಆರು ಮಂದಿ ಸಾವನ್ನಪ್ಪಿದ್ದಾರೆ.

ಮೊಹ್ಮಂಡ್ ಬುಡಕಟ್ಟು ಪ್ರಾಂತದ ಘಾಲಾನಾಯ್ ಪಟ್ಟಣದಲ್ಲಿರುವ ಸರಕಾರಿ ಕಾಲೊನಿಯನ್ನು ಪ್ರವೇಶಿಸಲು ಇಬ್ಬರು ಉಗ್ರರು ಯತ್ನಿಸಿದಾಗ, ಭದ್ರತಾ ಸಿಬ್ಬಂದಿ ಅವರನ್ನು ತಡೆಯಲು ಯತ್ನಿಸಿದರು. ಆಗ ಅವರಲ್ಲೊಬ್ಬಾತ ತನ್ನನ್ನೇ ಸ್ಫೋಟಿಸಿಕೊಂಡರೆ, ಇನ್ನೊಬ್ಬನನ್ನು ಭದ್ರತಾ ಸಿಬ್ಬಂದಿ ಗುಂಡಿಕ್ಕಿ ಹತ್ಯೆಗೈದಿದ್ದಾರೆಂದು, ಪಾಕಿಸ್ತಾನದ ಆಂತರಿಕ ಸೇವೆಗಳ ಸಾರ್ವಜನಿಕ ಸಂಪರ್ಕ ವಿಭಾಗ (ಐಎಸ್‌ಪಿಆರ್)ದ ವಕ್ತಾರರು ತಿಳಿಸಿದ್ದಾರೆ.

ಆತ್ಮಹತ್ಯಾ ಬಾಂಬರ್‌ಗಳು ಮೊಹ್ಮಂಡ್ ಪ್ರಾಂತಕ್ಕೆ ನುಸುಳಿರುವ ಬಗ್ಗೆ ಭದ್ರತಾಸಂಸ್ಥೆಗಳಿಗೆ ಗುಪ್ತಚರ ಮಾಹಿತಿ ಲಭ್ಯವಾಗಿತ್ತೆಂದು ಐಎಸ್‌ಪಿಆರ್ ಹೇಳಿಕೆಯಲ್ಲಿ ತಿಳಿಸಿದೆ.

ಸ್ಫೋಟದಲ್ಲಿ ಶಾಲಾ ಶಿಕ್ಷಕ ಸಹಿತ ಇಬ್ಬರು ನಾಗರಿಕರು ಕೂಡಾ ಮೃತಪಟ್ಟಿದ್ದು, ಕನಿಷ್ಠ ಎಂಟು ಮಂದಿ ಗಾಯಗೊಂಡಿದ್ದಾರೆ. ಅವರಲ್ಲಿ ಮೂವರ ಪರಿಸ್ಥಿತಿ ಚಿಂತಾ ಜನಕವಾಗಿದ್ದು, ಅವರನ್ನು ಪೇಶಾವರದ ಆಸ್ಪತ್ರೆಗೆ ದಾಖಲಿಸಲಾಗಿದೆಯೆಂದು ಡಾನ್ ಪತ್ರಿಕೆ ವರದಿ ಮಾಡಿದೆ. ಸ್ಫೋಟದ ಬಳಿಕ ಇಡೀ ಪ್ರದೇಶವನ್ನು ಭದ್ರತಾಪಡೆಗಳು ಸುತ್ತುವರಿದಿದ್ದು, ಶೋಧ ಕಾರ್ಯಾಚರಣೆಯನ್ನು ಆರಂಭಿಸಲಾಗಿದೆಯೆಂದು ಅಧಿಕೃತ ಮೂಲಗಳು ತಿಳಿಸಿವೆ.

ಮೊಹಮ್ಮಂಡ್ ಪ್ರಾಂತವು, ಪಾಕಿಸ್ತಾನದ ಏಳು ಅರೆಸ್ವಾಯತ್ತ ಬುಡಕಟ್ಟು ಪ್ರದೇಶಗಳಲ್ಲೊಂದಾಗಿದೆ. ಈ ಪ್ರದೇಶಗಳಲ್ಲಿ ಕಳೆದೊಂದು ದಶಕದಿಂದ ಬಲವಾಗಿ ಬೇರುಬಿಟ್ಟಿರುವ ತಾಲಿಬಾನ್ ಹಾಗೂ ಅಲ್‌ಖಾಯ್ದಿ ಬಂಡುಕೋರರ ವಿರುದ್ಧ ಪಾಕ್ ಸೇನೆ ತೀವ್ರವಾದ ಹೋರಾಟ ನಡೆಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News