ಭಾರತದಿಂದ ಬೆಂಕಿಯೊಂದಿಗೆ ಸರಸ: ಚೀನಾ
ಬೀಜಿಂಗ್,ಫೆ.15: ತೈವಾನ್‌ನ ಸಂಸದೀಯ ನಿಯೋಗವೊಂದು ಭಾರತಕ್ಕೆ ಭೇಟಿ ನೀಡಿರುವ ವಿರುದ್ಧ ಬೀಜಿಂಗ್, ಹೊಸದಿಲ್ಲಿಗೆ ತನ್ನ ರಾಜತಾಂತ್ರಿಕ ಪ್ರತಿಭಟನೆಯನ್ನು ಹೊಸದಿಲ್ಲಿಗೆ ಸಲ್ಲಿಸಿರುವುದಾಗಿ ಚೀನಿ ವಿದೇಶಾಂಗ ಸಚಿವಾಲಯವು ಬುಧವಾರ ತಿಳಿಸಿದೆ.
ತೈವಾನ್ ಒಂದು ಅನಧಿಕೃತ ಪ್ರಾಂತವಾಗಿದ್ದು, ಅದಕ್ಕೆ ಇತರ ದೇಶಗಳ ಜೊತೆ ವಿಧ್ಯುಕ್ತವಾದ ರಾಜತಾಂತ್ರಿಕ ಸಂಬಂಧಗಳನ್ನು ಹೊಂದಲು ಹಕ್ಕಿಲ್ಲವೆಂದು ಚೀನಾ ಪ್ರತಿಪಾದಿಸುತ್ತಾ ಬಂದಿದೆ.
‘‘ಚೀನಾದೊಂದಿಗೆೆ ರಾಜತಾಂತ್ರಿಕ ಸಂಬಂಧಗಳನ್ನು ಹೊಂದಿರುವ ರಾಷ್ಟ್ರಗಳು ತೈವಾನ್ ಜೊತೆ ಯಾವುದೇ ವಿಧದ ಅಧಿಕೃತ ರಾಜತಾಂತ್ರಿಕ ವಿನಿಮಯಗಳನ್ನು ನಡೆಸುವುದು ಅಥವಾ ಯಾವುದೇ ಅಧಿಕೃತ ಸಂಸ್ಥೆಗಳನ್ನು ಸ್ಥಾಪಿಸುವುದನ್ನು ನಾವು ಪ್ರಬಲವಾಗಿ ವಿರೋಧಿಸುತ್ತೇವೆ. ಈ ವಿಷಯದಲ್ಲಿ ನಾವು ಖಡಾಖಂಡಿತವಾದ ನಿಲುವನ್ನು ಹೊಂದಿದ್ದೇವೆ’’ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಗೆಂಗ್ ಶುವಾಂಗ್ ತಿಳಿಸಿದ್ದಾರೆ.
‘‘ಭಾರತವು ಚೀನಾದ ಪ್ರಮುಖ ಕಾಳಜಿಗಳನ್ನು ಅರಿತುಕೊಳ್ಳುವುದು ಹಾಗೂ ಗೌರವಿಸುವುದು ಮತ್ತು ಏಕ ಚೀನಾ ನೀತಿಯನ್ನು ಒಪ್ಪಿಕೊಳ್ಳುವುದು’’ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.
ಈ ಮಧ್ಯೆ ಚೀನಾದ ಸರಕಾರಿ ಸ್ವಾಮ್ಯದ ಗ್ಲೋಬಲ್ ಟೈಮ್ಸ್ ಪತ್ರಿಕೆಯು, ‘‘ತೈವಾನ್ ವಿಷಯದಲ್ಲಿ ಚೀನಾದ ನಿಲುವಿಗೆ ಸವಾಲೆಸೆಯುವ ಮೂಲಕ ಭಾರತವು ಬೆಂಕಿಯ ಜೊತೆ ಆಟವಾಡುತ್ತಿದೆ’’ ಎಂದು ಹೇಳಿದೆ. ಹೊಸದಿಲ್ಲಿಯು ಬೀಜಿಂಗನ್ನು ಕೆಣಕಲು, ತೈವಾನ್ ವಿಷಯವನ್ನು ಬಳಸಿಕೊಳ್ಳುತ್ತಿದೆಯೆಂದು ಪತ್ರಿಕೆಯ ಸಂಪಾದಕೀಯ ಪುಟದಲ್ಲಿ ಪ್ರಕಟವಾದ ಲೇಖನವು ಕಿಡಿಕಾರಿದೆ. ಪಾಕಿಸ್ತಾನದಲ್ಲಿ ಚೀನಾವು 46 ಶತಕೋಟಿ ವೌಲ್ಯದ ಆರ್ಥಿಕ ಕಾರಿಡಾರ್ ನಿರ್ಮಿಸುತ್ತಿರುವುದನ್ನು ಸಹಿಸದೆ ಭಾರತವು ಹೀಗೆ ಮಾಡುತ್ತಿದೆಯೆಂದು ಅದು ಆಪಾದಿಸಿದೆ.
ಚೀನಾ-ಪಾಕ್ ಆರ್ಥಿಕ ಕಾರಿಡಾರ್ ಯೋಜನೆಯು ವಿವಾದಿತ ಕಾಶ್ಮೀರ (ಪಿಓಕೆ)ದಲ್ಲಿ ಹಾದುಹೋಗುತ್ತಿರುವ ಹಿನ್ನೆಲೆಯಲ್ಲಿ, ತೈವಾನ್‌ನ್ನು ದಾಳವಾಗಿ ಬಳಸಕೊಳ್ಳುವಂತೆ ಮೋದಿಸರಕಾರಕ್ಕೆ ಭಾರತೀಯ ರಾಜತಂತ್ರಜ್ಞರು ಸಲಹೆ ಮಾಡಿದ್ದಾರೆಂದು ಪತ್ರಿಕೆ ಆರೋಪಿಸಿದೆ.