ಈ ಶಾಲೆ 16 ವರ್ಷಗಳಿಂದಲೂ ಸ್ವಂತ ವಿದ್ಯುತ್ ಬಳಸುತ್ತಿದೆ !

Update: 2017-02-16 08:51 GMT

ಎಸ್‌ಎಎಸ್ ನಗರ(ಪಂಜಾಬ್),ಫೆ.16: ಇಲ್ಲಿಯ ಸ್ವಾರಾ ಗ್ರಾಮದಲ್ಲಿರುವ ಮಾತಾ ಸಾಹಿಬ್ ಕೌರ್ ಪಬ್ಲಿಕ್ ಸೀನಿಯರ್ ಸೆಕಂಡರಿ ಸ್ಕೂಲ್ ಕಳೆದ 16 ವರ್ಷಗಳಿಂದಲೂ ಸರಕಾರಿ ವಿದ್ಯುತ್ತಿನ ಹಂಗಿಲ್ಲದೆ ನಡೆಯುತ್ತಿದೆ. ವಿದ್ಯುತ್ತಿಗಾಗಿ ಶಾಲೆಯಲ್ಲಿ ಮೂರು ಜನರೇಟರ್‌ಗಳನ್ನು ಸ್ಥಾಪಿಸಲಾಗಿದ್ದು, ಇದಕ್ಕಾಗಿ ಪ್ರತಿ ತಿಂಗಳು 1.5 ಲಕ್ಷ ರೂ.ಗಳನ್ನು ವ್ಯಯಿಸಲಾಗುತ್ತಿದೆ. ಜೊತೆಗೆ ಸೌರ ಫಲಕಗಳನ್ನೂ ಅಳವಡಿಸಲಾಗಿದೆ.

 ಶಾಲೆಯು ಭೂಮಿಯ ಕೃಷಿಯೇತರ ಬಳಕೆಗಾಗಿ ಬದಲಾವಣೆಯ ಪ್ರಮಾಣಪತ್ರ (ಸಿಎಲ್‌ಯು)ವನ್ನು ಹೊಂದಿಲ್ಲ, ಹೀಗಾಗಿ ಅದಕ್ಕೆ ಸರಕಾರದ ವಿದ್ಯುತ್ ಪೂರೈಕೆ ಸಂಸ್ಥೆಯು ವಿದ್ಯುತ್ ಸಂಪರ್ಕವನ್ನು ನೀಡಿಲ್ಲ.

 ಚಂಡೀಗಡದ ತೇಗ್ ಬಹಾದೂರ್ ಗುರುದ್ವಾರವು ಈ ಶಾಲೆಯನ್ನು ನಡೆಸುತ್ತಿದೆ. ಶಾಲೆಯಿರುವ ಎಂಟು ಎಕರೆ ಭೂಮಿಯನ್ನು ಅದು ರೈತನೊಬ್ಬನಿಂದ ಖರೀದಿಸಿತ್ತು.

ಸಹಶಿಕ್ಷಣವಿರುವ ಈ ಶಾಲೆಯಲ್ಲಿ ಪ್ರಿ ನರ್ಸರಿಯಿಂದ 12ನೇ ತರಗತಿಯವರೆಗಿನ 2,108 ಮಕ್ಕಳು ಕಲಿಯುತ್ತಿದ್ದಾರೆ. ಶಾಲೆಯು ಗ್ರಾಮೀಣ ಪ್ರದೇಶಗಳ ಮಕ್ಕಳಿಗೆ ನಗರಗಳ ಶಾಲೆಗಳಲ್ಲಿರುವ ಎಲ್ಲ ಸೌಲಭ್ಯಗಳನ್ನೂ ಒದಗಿಸುತ್ತಿದೆ.

 ಈ ಶಾಲೆಯು ಆರಂಭಗೊಂಡಿದ್ದು 2000,ಎಪ್ರಿಲ್‌ನಲ್ಲಿ. ಸಿಎಲ್‌ಯು ಪ್ರಮಾಣಪತ್ರ ಕ್ಕಾಗಿ ಶಾಲೆಯು ಅದೇ ವರ್ಷ ಮೊದಲ ಬಾರಿಗೆ ಅರ್ಜಿ ಸಲ್ಲಿಸಿತ್ತು. ಶಾಲೆಯನ್ನು ಸಂಪರ್ಕಿಸುವ ರಸ್ತೆ ತುಂಬ ಕಿರಿದಾಗಿದೆ ಎಂಬ ಕಾರಣದಿಂದ ಆಗ ಅದನ್ನು ತಿರಸ್ಕರಿಸಲಾಗಿತ್ತು.

ಕನಿಷ್ಠ 40 ಅಡಿ ಅಗಲದ ರಸ್ತೆ ಇರಬೇಕು ಎಂದು ಅಧಿಕಾರಿಗಳು ಶಾಲಾಡಳಿತಕ್ಕೆ ಸೂಚಿಸಿದ್ದರು. ಆದರೆ ಶಾಲೆಯ ರಸ್ತೆ ಕೇವಲ 11 ಅಡಿ ಅಗಲವಿತ್ತು. ಹೀಗಾಗಿ ಆಡಳಿತವು ಇನ್ನಷ್ಟು ಜಾಗವನ್ನು ಖರೀದಿಸಿತ್ತು ಮತ್ತು ರಸ್ತೆ ಅಗಲೀಕರಣದ ಬಳಿಕ ಜುಲೈ,2005ರಲ್ಲಿ ಅಕ್ರಮ-ಸಕ್ರಮ ಯೋಜನೆಯಡಿ ಇನ್ನೊಮ್ಮೆ ಅರ್ಜಿಯನ್ನು ಸಲ್ಲಿಸಿತ್ತು. ಆದರೆ ಈ ಅರ್ಜಿ ಇನ್ನೂ ಬಾಕಿಯಿದೆ.

ಶಾಲಾ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಪರವಾನಿಗೆಯನ್ನು ಪಡೆದುಕೊಂಡಿಲ್ಲ. ಎಲ್ಲ ಅಗತ್ಯಗಳನ್ನು ಪೂರೈಸಿದ ಹೊರತು ಸಿಎಲ್‌ಯು ಪ್ರಮಾಣಪತ್ರವನ್ನು ನೀಡಲು ಸಾಧ್ಯವಿಲ್ಲ ಎಂದು ಬೃಹತ್ ಮೊಹಾಲಿ ಪ್ರದೇಶಾಭಿವೃದ್ಧಿ ಪ್ರಾಧಿಕಾರವು ಹೇಳಿದೆ.

ಹೀಗಾಗಿ ಶಾಲೆಗೆ ಸಿಎಲ್‌ಯು ಪ್ರಮಾಣಪತ್ರ ಲಭಿಸುವವರೆಗೆ ಜನರೇಟರ್ ವಿದ್ಯುತ್ತೇ ಗತಿ ಮತ್ತು ಪ್ರತಿ ತಿಂಗಳು 1.5 ಲ.ರೂ.ವ್ಯಯಿಸುವುದು ಅನಿವಾರ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News