ಜಾನಪದ ಅಧ್ಯಯನದಲ್ಲೂ ಬದಲಾವಣೆಗಳಾಗಬೇಕಿದೆ: ಪ್ರೊ.ಎಚ್.ಎಂ. ಮಹೇಶ್ವರಯ್ಯ

Update: 2017-02-16 11:47 GMT

ಕೊಣಾಜೆ, ಫೆ.16: ಇಂದು ಆಧುನಿಕತೆ ತಂತ್ರಜ್ಞಾನಗಳು ಬೆಳೆದಿರುವಂತೆಯೇ ನಮ್ಮ ಜಾನಪದ ಅಧ್ಯಯನದಲ್ಲೂ ಬದಲಾವಣೆಗಳನ್ನು ಕಂಡುಕೊಳ್ಳಬೇಕಿದೆ. ಇದೀಗ ಭಾರತದಲ್ಲೂ ಕೂಡಾ ಜಾನಪದವನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡುವ ಕ್ರಮ ಬೆಳೆದುಬಂದಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಚ್.ಎಂ.ಮಹೇಶ್ವರಯ್ಯ ಅವರು ಅಭಿಪ್ರಾಯಪಟ್ಟರು.

ಮಂಗಳೂರು ವಿಶ್ವವಿದ್ಯಾನಿಲಯದ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆ ಹಾಗೂ ದಕ್ಷಿಣ ಭಾರತೀಯ ಜಾನಪದ ಅಧ್ಯಯನ ಸಂಸ್ಥೆ(ರಿ) ತಿರುವನಂತಪುರ ಇವರ ಸಂಯುಕ್ತ ಆಶ್ರಯದಲ್ಲಿ ಗುರುವಾರ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ನಡೆದ ಜಾನಪದ ವಿಚಾರಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಜಾನಪದರು ಕೃಷಿಯಲ್ಲಿ, ಭತ್ತದ ವಿವಿಧ ತಳಿಗಳ ಉತ್ಪಾದನೆಯಲ್ಲಿ ವೈಜ್ಞಾನಿಕ ಆವಿಷ್ಕಾರಗಳನ್ನು ಮಾಡಿ ಜಗತ್ತಿಗೇ ಅಪೂರ್ವವಾದ ಕೊಡುಗೆ ನೀಡಿದವರು. ಅಲ್ಲದೆ ಜಾನಪದ ವೈದ್ಯಪರಂಪರೆಯೂ ಬೆಳೆದು ಬಂದ ಹಾದಿಯೂ ಕೂಡಾ ವಿಶಿಷ್ಟವಾದುದು. ಆದರೆ ನಮ್ಮ ಪೂರ್ವಜರು ಯಾವತ್ತಿಗೂ ಪ್ರಚಾರಕ್ಕೆ ಅಥವಾ ಪೇಟೆಂಟ್‌ಗಾಗಿ ಹಂಬಲಿಸಿದವರಲ್ಲ. ಇಂತಹ ಶ್ರೇಷ್ಟವಾದ ಜಾನಪದ ಸಂಪತ್ತು ನಮ್ಮಲ್ಲಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

ಕರ್ನಾಟಕದ ಕರಾವಳಿ ಪ್ರದೇಶವು ಜಾನಪದ ಸಂಸ್ಕೃತಿಯ ಕೇಂದ್ರವಾಗಿದ್ದು, ಹಲವಾರು ವಿದೇಶಿ ಜಾನಪದ ವಿದ್ವಾಂಸರು ಕೂಡಾ ಕರಾವಳಿ ಭಾಗದಲ್ಲಿ ಬಂದು ಅಧ್ಯಯನ ಮಾಡಿ ವಾಪಸ್ಸಾಗಿದ್ದಾರೆ. ಇಲ್ಲಿ ತುಳು ಜಾನಪದ ವಿಷಯಗಳು ಸೇರಿದಂತೆ ಹಲವಾರು ಮಹತ್ವಪೂರ್ಣ ಸಂಗತಿಗಳು ಇರುವುದೇ ಪ್ರಮುಖ ಕಾರಣವಾಗಿದೆ. ಈ ಭಾಗದಲ್ಲಿ ಪ್ರೊ.ವಿವೇಕ್ ರೈ, ಪ್ರೊ.ಚಿನ್ನಪ್ಪ ಗೌಡ, ಲಾರಿಹಾಂಕರ್ ಸೇರಿದಂತೆ ಹಲವು ವಿದ್ವಾಂಸರು ತುಳುನಾಡಿನ ಗೋಪಾಲನಾಯ್ಕ ಅವರು ಕಟ್ಟಿಕೊಟ್ಟ ಸಿರಿ ಮಹಾಕಾವ್ಯವನ್ನು ಫಿನ್‌ಲ್ಯಾಂಡ್‌ನಲ್ಲಿ ಪ್ರಕಟಗೊಳ್ಳುವಂತೆ ಮಾಡಿದ್ದಾರೆ ಇದೊಂದು ಅಪೂರ್ವವಾದ ದಾಖಲಾತಿಯಾಗಿದೆ ಎಂದರು.

ದಕ್ಷಿಣ ಭಾರತೀಯ ಜಾನಪದ ಅಧ್ಯಯನ ಸಂಸ್ಥೆಯು ಈಗಾಗಲೇ ಜಾನಪದ ವಿಷಯಕೆ ಅ ಯೋಜನೆಗಳನ್ನು ಪೂರ್ಣಗೊಳಿಸಿದೆ ಮತ್ತು ಜಾನಪದ ವಿಷಯಕ್ಕೆ ಸಂಬಂಧಿಸಿದಂತೆ ಹಲವಾರು ಕಾರ್ಯಗಳನ್ನು ನಡೆಸುತ್ತಾ ಬಂದಿದೆ. ಜಾನಪದ ವಿಷಯದಲ್ಲಿ ಸಂಶೋಧನೆ ನಡೆಸುವ ಸಂಶೋಧಕರಿಗೆ ವೀರಸುಬ್ರಹ್ಮಣ್ಯಂ ಫೆಲೋಶಿಪ್‌ನ್ನು ನೀಡಲಾಗುತ್ತಿದೆ. ಭಾರತದಲ್ಲಿ ಜಾನಪದ ಸರ್ವೆ ಹಾಗೂ ರಾಷ್ಟ್ರೀಯ ಜಾನಪದ ಅಕಾಡಮಿಯ ನಿರ್ಮಾಣಕ್ಕಾಗಿ ದಕ್ಷಿಣ ಭಾರತೀಯ ಜಾನಪದ ಅಧ್ಯಯನ ಸಂಸ್ಥೆಯ ವತಿಯಿಂದ ಒತ್ತಾಯಿಸಲಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಂಗಳೂರು ವಿವಿ ಕುಲಸಚಿವ ಪ್ರೊ.ಕೆ.ಎಂ.ಲೋಕೇಶ್, ಜಾನಪದ ಅಧ್ಯಯನವು ಜನಾಂಗೀಯತೆಯ ಅಸ್ಮಿತೆಯಾಗಿದೆ ಮತ್ತು ಇತಿಹಾಸವನ್ನು ಅರಿವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇಂದು ಜಾನಪದ ಸಂಗತಿಗಳನ್ನು ದಾಖಲಾತಿ ಮಾಡಿಕೊಳ್ಳುವ ಸಂಪ್ರದಾಯ ಬೆಳೆದು ಬಂದಿದ್ದು ಇದರಿಂದ ಹಲವಾರು ಅಳಿದು ಸಂಗತಿಗಳನ್ನು ಅರಿತುಕೊಳ್ಳಲು ಮತ್ತು ವಿಸ್ತರಿಸಲು ಅವಕಾಶವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಪ್ರೊ.ಅಭಯಕುಮಾರ್ ಉಪಸ್ಥಿತರಿದ್ದರು. ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಪ್ರೊ.ಸೋಮಣ್ಣ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕರ್ನಾಟಕ ರಾಜ್ಯ ಫಾಸಿಲ್ಸ್‌ನ ಕಾರ್ಯದರ್ಶಿ ಡಾ.ರಾಜಶ್ರೀ ವಂದಿಸಿದರು. ವಿದ್ಯಾರ್ಥಿ ಶ್ಯಾಮ್ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News