ಮಂಗಳೂರು: ಜಿಲ್ಲೆಯಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಕುಸಿತ; ಜಿಲ್ಲಾಧಿಕಾರಿ ಕಳವಳ

Update: 2017-02-16 14:22 GMT

ಮಂಗಳೂರು, ಫೆ.16: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಸಂಖ್ಯೆ ಅನುಪಾತದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಕುಸಿತವಾಗುತ್ತಿರುವ ಬಗ್ಗೆ ಜಿಲ್ಲಾಧಿಕಾರಿ ಡಾ. ಕೆ.ಜಿ ಜಗದೀಶ್ ಕಳವಳ ವ್ಯಕ್ತಪಡಿಸಿದ್ದಾರೆ.

ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ರಾಷ್ಟ್ರೀಯ ಆರೋಗ್ಯ ಅಭಿಯಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಸ್ತುತ ಜನನ ಪ್ರಮಾಣ ಜಿಲ್ಲೆಯಲ್ಲಿ 1000 ಪುರುಷರ ಅನುಪಾತಕ್ಕೆ 948 ಹೆಣ್ಣುಮಕ್ಕಳ ಅನುಪಾತವಿದೆ. ಈ ನಿಟ್ಟಿನಲ್ಲಿ ಪ್ರಸವಪೂರ್ವ ಲಿಂಗ ಪತ್ತೆ ವಿರುದ್ಧ ತೀವ್ರ ಕಾರ್ಯಾಚರಣೆ ನಡೆಸಬೇಕು. ಹಾಲಿ ಸ್ಕ್ಯಾನಿಂಗ್ ಕೇಂದ್ರಗಳು, ಆಸ್ಪತ್ರೆಗಳಲ್ಲಿರುವ ಸ್ಕ್ಯಾನಿಂಗ್ ಯಂತ್ರಗಳ ಕಾರ್ಯಚಟವಟಿಕೆಗಳ ಮೇಲೆ ತೀವ್ರ ನಿಗಾ ಇಡಬೇಕು. ಜಿಲ್ಲೆಯಲ್ಲಿ ಯಾವುದೇ ಹೊಸ ಸ್ಕ್ಯಾನಿಂಗ್ ಕೇಂದ್ರಗಳ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸದಂತೆ ಅವರು ಆರೋಗ್ಯ ಇಲಾಖೆಗೆ ಸೂಚಿಸಿದರು.

ಹೆರಿಗೆ ಸಾವು: 
ದ.ಕ ಜಿಲ್ಲೆಯಲ್ಲಿ ಉತ್ತಮ ಆರೋಗ್ಯ ವ್ಯವಸ್ಥೆ ಇದ್ದರೂ, ಹೆರಿಗೆ ವೇಳೆ ಅಥವಾ ಹೆರಿಗೆಯ ನಂತರ ತಾಯಿ ಸಾವಿನಂತಹ ಪ್ರಕರಣಗಳು ಕಂಡುಬರುವುದಕ್ಕೆ ಜಿಲ್ಲಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದರು. ಈ ಹಿಂದೆ ಹಲವು ಸಭೆಗಳಲ್ಲಿ ಗಂಭೀರ ಹೆರಿಗೆ ಪ್ರಕರಣಗಳನ್ನು ನಿಭಾಯಿಸುವ ಬಗ್ಗೆ ಹಲವು ಸೂಚನೆಗಳನ್ನು ನೀಡಲಾಗಿದೆ. ಆದರೂ ಹೆರಿಗೆ ವೇಳೆ ಅಥವಾ ಬಳಿಕ ಸಾವನ್ನಪ್ಪುವ ಪ್ರಕರಣಗಳು ನಡೆಯುತ್ತಿವೆ. ಸರಕಾರಿ ಆಸ್ಪತ್ರೆಗಳಲ್ಲಿ ಗಂಭೀರ ಸ್ವರೂಪದ ಹೆರಿಗೆ ನಿಭಾಯಿಸುವ ಸಾಮರ್ಥ್ಯವಿಲ್ಲದಿದ್ದಲ್ಲಿ, ಸಾಕಷ್ಟು ಮುಂಚೆಯೇ ಉನ್ನತ ಆಸ್ಪತ್ರೆಗಳಿಗೆ ಅಥವಾ ಖಾಸಗಿ ಸ್ಪೆಷಾಲಿಟಿ ಆಸ್ಪತ್ರೆಗಳಿಗೆ ಕಳುಹಿಸಬೇಕು. ಇದಕ್ಕೆ ತಗಲುವ ವೆಚ್ಚವನ್ನು ಸರಕಾರವೇ ಭರಿಸಲಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಗಂಭೀರ ಹೆರಿಗೆ ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಇದ್ದಲ್ಲಿ ಆಸ್ಪತ್ರೆಯವರೇ ಸೂಕ್ತ ವ್ಯವಸ್ಥೆ ಮಾಡಬೇಕು. ಇದಕ್ಕಾಗಿ ರೋಗಿಯ ಕುಟುಂಬದವರನ್ನು ಅಲೆದಾಡಿಸಬಾರದು ಎಂದು ಅವರು ಸೂಚಿಸಿದರು.

ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ 2016ರ ನವೆಂಬರ್ 25 ರಂದು ಫಾತಿಮಾ ರೊಹರಾ ಎಂಬ ಮಹಿಳೆ ಮಗುವಿಗೆ ಜನ್ಮವಿತ್ತು ಬಳಿಕ ರಕ್ತಸ್ರಾವವಾಗಿ ಸಾವನ್ನಪ್ಪಿರುವ ಈ ಪ್ರಕರಣದಲ್ಲಿ ಆಸ್ಪತ್ರೆಯ ನಿರ್ಲಕ್ಷ್ಯ ಕಂಡು ಬರುತ್ತಿದ್ದು ಈ ಬಗ್ಗೆ ತಕ್ಷಣವೇ ವರದಿ ನೀಡುವಂತೆ ಆರೋಗ್ಯ ಇಲಾಖೆಗೆ ಡಿ.ಸಿ. ಸೂಚಿಸಿದರು.

ಹೆರಿಗೆ ವೇಳೆ ನಿರ್ಲಕ್ಷ್ಯದಿಂದ ತಾಯಿ ಮಗು ಸಾವನ್ನಪ್ಪಿದರೆ ಅಂತವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದರು.

ಎಂಡೋ ಸಲ್ಫಾನ್: 
ಇದೇ ಸಂದರ್ಭದಲ್ಲಿ ಎಂಡೋ ಸಲ್ಫಾನ್ ಸಂತ್ರಸ್ತರ ಪುನರ್ವಸತಿ ಕಾರ್ಯಕ್ರಮ ಪರಿಶೀಲಿಸಿದ ಜಿಲ್ಲಾಧಿಕಾರಿಗಳು ಎಂಡೋಸಲ್ಫಾನ್ ಸಂತ್ರಸ್ತರಿಗೆ ಶಾಶ್ವತ ಪುನರ್ವಸತಿ ಕೇಂದ್ರ ಸ್ಥಾಪಿಸಲು ರೂ.10.30 ಕೋಟಿ ಅಂದಾಜು ಪಟ್ಟಿ ಸರಕಾರಕ್ಕೆ ಸಲ್ಲಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ 2,998 ಸಂತ್ರಸ್ತರಿಗೆ ಮಾಸಿಕ ಮಿತವೇತನ ಲಭ್ಯವಾಗುತ್ತಿದೆ. 4 ಸಂಚಾರಿ ಆರೋಗ್ಯ ಘಟಕ ಸ್ಥಾಪಿಸಲು ಟೆಂಡರ್ ಕರೆಯಲಾಗಿದೆ. ಎಂಡೋಸಂತ್ರಸ್ತರಿಗೆ ಫಿಸಿಯೋಥೆರಪಿ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ವಿಟ್ಲ, ಮೂಡಬಿದ್ರೆ, ಪುತ್ತೂರು, ಸುಳ್ಯ ಮತ್ತು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗಳಲ್ಲಿ ಫಿಸಿಯೋಥೆರಪಿ ಘಟಕ ತೆರೆಯಲಾಗುತ್ತಿದೆ ಎಂದರು.

ಎಂಡೋ ಸಂತ್ರಸ್ತರಿಗೆ ಟಿ.ವಿ.9 ಸಂಸ್ಥೆಯವರು ಸಂಗ್ರಹಿಸಿದ ದೇಣಿಗೆಯಿಂದ ಕೌಶಲ್ಯ ಅಭಿವೃದ್ಧಿ ಕೇಂದ್ರ ತೆರೆಯಲಾಗುವುದು. ಈ ಬಗ್ಗೆ ಟಿ.ವಿ. 9 ಸಾನಿಧ್ಯ ಸಂಸ್ಥೆ ಸಹಯೋಗದಲ್ಲಿ ಉಜಿರೆಯಲ್ಲಿ ಕೌಶಲ್ಯ ಅಭಿವೃದ್ಧಿ ಕೇಂದ್ರ ತೆರೆಯಲು ತ್ರಿಕೂಟ ಒಪ್ಪಂದ ಮಾಡಲು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಯವರ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳು ಹೇಳಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಂ.ಆರ್ ರವಿ, ಅಪರ ಜಿಲ್ಲಾಧಿಕಾರಿ ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ರಾವ್, ಪುತ್ತೂರು ಉಪವಿಭಾಗಾಧಿಕಾರಿ ರಘುನಂದನ್ ಮೂರ್ತಿ, ವೆನ್‌ಲಾಕ್ ಅಧೀಕ್ಷಕಿ ಡಾ. ರಾಜೇಶ್ವರೀ ದೇವಿ, ಲೇಡಿಘೋಷನ್ ಅಧೀಕ್ಷಕಿ ಡಾ. ಸವಿತಾ, ಆರೋಗ್ಯ ಇಲಾಖೆಯ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News