×
Ad

2117ರ ವೇಳೆಗೆ ಮಂಗಳಗ್ರಹದಲ್ಲಿ ಮೊದಲ ನಗರವನ್ನು ನಿರ್ಮಿಸಲಿರುವ ಯುಎಇ

Update: 2017-02-16 20:45 IST

ದುಬೈ,ಫೆ.16: ವಿಶ್ವದ ಅತ್ಯಂತ ಎತ್ತರದ ಕಟ್ಟಡ ‘ಬುರ್ಜ್ ಖಲೀಫಾ ’ವನ್ನು ನಿರ್ಮಿಸಿದ ಬಳಿಕ ಸಂಯುಕ್ತ ಅರಬ್ ಗಣರಾಜ್ಯ(ಯುಎಇ)ವು ಈಗ ತಜ್ಞ ಅಂತರಾಷ್ಟ್ರೀಯ ಸಂಸ್ಥೆಗಳು ಮತ್ತು ವೈಜ್ಞಾನಿಕ ಸಂಸ್ಥೆಗಳ ಸಹಯೋಗದಿಂದ ಮಂಗಳ ಗ್ರಹದಲ್ಲಿ ಮೊದಲ ನಗರವನ್ನು ಸ್ಥಾಪಿಸುವ ತನ್ನ ಯೋಜನೆಯನ್ನು ಪ್ರಕಟಿಸಿದೆ.

 ಯುಎಇಯ ಉಪಾಧ್ಯಕ್ಷ ಹಾಗೂ ಪ್ರಧಾನ ಮಂತ್ರಿ ಮತ್ತು ದುಬೈ ಆಡಳಿತಗಾರರಾಗಿರುವ ಶೇಖ್ ಮುಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಮತ್ತು ಅಬುಧಾಬಿಯ ಯುವರಾಜ ಹಾಗೂ ಯುಎಇ ಸಶಸ್ತ್ರ ಪಡೆಗಳ ಡೆಪ್ಯೂಟಿ ಸುಪ್ರೀಂ ಕಮಾಂಡರ್ ಶೇಖ್ ಮುಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅವರು ವಿಶ್ವ ಸರಕಾರ ಶೃಂಗದಲ್ಲಿ ಮಂಗಳಗ್ರಹ 2117 ಯೋಜನೆಯನ್ನು ಪ್ರಕಟಿಸಿದರು.

  100 ವರ್ಷಗಳ ರಾಷ್ಟ್ರೀಯ ಯೋಜನೆಯ ಅಂಗವಾಗಿ ಜನರು ಮಂಗಳಗ್ರಹವನ್ನು ಹೇಗೆ ತಲುಪಬಹುದು ಮತ್ತು ಆ ಗ್ರಹದಲ್ಲಿ ಆಹಾರ ಮತ್ತು ಶಕ್ತಿಯನ್ನು ಹೇಗೆ ಉತ್ಪಾದಿಸಬಹುದು ಎನ್ನುವುದನ್ನು ಕಂಡುಕೊಳ್ಳಲು ಸಂಶೋಧನೆಗಳು ನಡೆಯಲಿವೆ.

ಯೋಜನೆಯನ್ನು ಪ್ರಕಟಿಸಿದ ಸಂದರ್ಭದಲ್ಲಿ ದುಬೈ ಮಾಧ್ಯಮ ಕಚೇರಿಯು ಕಂಪ್ಯೂಟರ್‌ನಲ್ಲಿ ರಚಿಸಲಾದ ಮಂಗಳಗ್ರಹದ ಮೊದಲ ನಗರದ ಚಿತ್ರಗಳನ್ನು ಬಿಡುಗಡೆಗೊಳಿಸಿತು.

 ಇತರ ಗ್ರಹಗಳ ಮೇಲೆ ಪದಾರ್ಪಣೆ ಮಾಡುವುದು ಮಾನವನ ಸುದೀರ್ಘ ಕಾಲದ ಕನಸಾಗಿದೆ. ಈ ಕನಸನ್ನು ನನಸಾಗಿಸುವಲ್ಲಿ ಅಂತರಾಷ್ಟ್ರೀಯ ಪ್ರಯತ್ನಗಳ ನೇತೃತ್ವವನ್ನು ಯುಎಇ ವಹಿಸುವಂತೆ ಮಾಡುವುದು ನಮ್ಮ ಉದ್ದೇಶವಾಗಿದೆ ಎಂದು ಶೇಖ್ ಮುಹಮ್ಮದ್ ಬಿನ್ ರಶೀದ್ ಹೇಳಿದರು.

ಯುಎಇ ಬಾಹ್ಯಾಕಾಶ ವಿಜ್ಞಾನದಲ್ಲಿ ಹಣ ಹೂಡಿಕೆ ಮಾಡುತ್ತಿರುವ ವಿಶ್ವದ 9 ಮುಖ್ಯ ರಾಷ್ಟ್ರಗಳಲ್ಲಿ ಒಂದಾಗಿದೆ ಎಂದರು.

ಬಾಹ್ಯಾಕಾಶ ಅನ್ವೇಷಣೆಗೆ ವೈಜ್ಞಾನಿಕ ಪ್ರಯತ್ನಗಳ ಭಾಗವಾಗಿರುವ ಯುಎಇ ಮಾನವ ಜ್ಞಾನ ವಿಕಾಸಕ್ಕೆ ವೈಜ್ಞಾನಿಕ ಕೊಡುಗೆಯನ್ನು ನೀಡುತ್ತಿದೆ ಎಂದು ಶೇಖ್ ಮುಹಮ್ಮದ್ ಬಿನ್ ಝಾಯೆದ್ ತಿಳಿಸಿದರು.

ತನ್ನ ಈ ಯೋಜನೆಯ ಅಂಗವಾಗಿ ಯುಎಇ ಮುಂದಿನ ದಶಕಗಳಲ್ಲಿ ಜನರನ್ನು ಮಂಗಳಗ್ರಹಕ್ಕೆ ಸಾಗಿಸಲು ವೈಜ್ಞಾನಿಕ ಮಾರ್ಗಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ತನ್ನ ಯುವವಿಜ್ಞಾನಿಗಳನ್ನು ಸಿದ್ಧಗೊಳಿಸಲಿದೆ.

2015ರಲ್ಲಿ ಯುಎಇ ತನ್ನ ಮಂಗಳ ಅನ್ವೇಷಣೆ ಅಭಿಯಾನವನ್ನು ಪ್ರಕಟಿಸಿತ್ತು. ಈ ಯೋಜನೆಯಡಿ 2021ರಲ್ಲಿ ಅರಬ್ ಜಗತ್ತಿನ ಮೊದಲ ಬಾಹ್ಯಾಕಾಶ ನೌಕೆಯು ಮಂಗಳನಲ್ಲಿ ಇಳಿಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News