‘ಅನನುಭವಿ’ಟೀಕೆಗೆ ಮೋದಿಗೆ ಅಖಿಲೇಶ್ ತಿರುಗೇಟು
ಮೈನ್‌ಪುರಿ,ಫೆ.16: ತಾನು ಅನನುಭವಿ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಟೀಕೆಗೆ ಇಂದು ಲಘುವಾದ ಧಾಟಿಯಲ್ಲಿಯೇ ತಿರುಗೇಟು ನೀಡಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ ಅವರು, ತಾನು ಸೈಕಲ್‌ನ್ನು ಎಷ್ಟು ವೇಗವಾಗಿ ಓಡಿಸುತ್ತೇನೆಂದರೆ ಬಿಎಸ್‌ಪಿಯ ಆನೆಯಾಗಲೀ ಬಿಜೆಪಿಯ ಕಮಲವಾಗಲೀ ಅದರ ಹತ್ತಿರಕ್ಕೂ ಬರಲು ಸಾಧ್ಯವಿಲ್ಲ ಎಂದು ಹೇಳಿದರು. ಸೈಕಲ್ ಎಸ್‌ಪಿಯ ಮತ್ತು ಆನೆ ಹಾಗೂ ಕಮಲ ಬಿಎಸ್‌ಪಿ ಮತ್ತು ಬಿಜೆಪಿಯ ಚುನಾವಣಾ ಚಿಹ್ನೆಗಳಾಗಿವೆ.
ಬುಧವಾರ ಕನೌಜ್‌ನಲ್ಲಿ ಚುನಾವಣಾ ಭಾಷಣ ಮಾಡಿದ್ದ ಮೋದಿ, ಅಖಿಲೇಶ್‌ಗೆ ಅನುಭವ ಕಡಿಮೆ. 1984ರಲ್ಲಿ ತನ್ನ ತಂದೆ ಮುಲಾಯಂ ಸಿಂಗ್ ಅವರನ್ನೇ ಕೊಲ್ಲಲು ಯತ್ನಿಸಿದ್ದ ಕಾಂಗ್ರೆಸ್ ಪಕ್ಷದೊಡನೆ ಮೈತ್ರಿ ಮಾಡಿಕೊಂಡಿರುವುದಕ್ಕಿಂತ ಹೆಚ್ಚಿನ ನಾಚಿಕೆಗೇಡು ಬೇರೇನಿದೆ ಎಂದು ಪ್ರಶ್ನಿಸಿದ್ದರು.
ಇಲ್ಲಿಗೆ ಸಮೀಪದ ಕರ್ನಾಲ್‌ನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅಖಿಲೇಶ್,ಮೋದಿಯವರ ಸಲಹೆಗಾರರು 1984ರಷ್ಟು ಹಿಂದೆ ಹೋಗಬೇಕಾಗಿರಲಿಲ್ಲ. ಅವರು ಉಪಚುನಾವಣೆಯಲ್ಲಿ ನಮ್ಮನ್ನು ಸೋಲಿಸಿದ್ದ ಕಾಂಗ್ರೆಸ್‌ನ ರಾಜ್ಯಾಧ್ಯಕ್ಷ ರಾಜ್ ಬಬ್ಬರ್ ಅವರ ಇತ್ತೀಚಿನ ಉದಾಹರಣೆಯನ್ನೇ ಮೋದಿಯವರಿಗೆ ತಿಳಿಸಬೇಕಿತ್ತು ಎಂದ ರು. ಬಿಜೆಪಿ ಈಗಾಗಲೇ ಚುನಾವಣೆಯನ್ನು ಸೋತಿದೆ. ಹೀಗಾಗಿ ಇಂತಹ ಹಳೆಯ ಘಟನೆಯನ್ನು ನೆನಪಿಸಿಕೊಳ್ಳುತ್ತಿದೆ ಎಂದರು.