ಮೊದಲ ಟೆಸ್ಟ್ ಗೆದ್ದರೆ ಭಾರತಕ್ಕೆ ಮಿಲಿಯನ್ ಡಾಲರ್
ಹೊಸದಿಲ್ಲಿ, ಫೆ.16: ಪ್ರವಾಸಿ ಆಸ್ಟ್ರೇಲಿಯ ತಂಡದ ವಿರುದ್ಧ ಫೆ.23 ರಿಂದ ಪುಣೆಯಲ್ಲಿ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸಲು ಸಮರ್ಥವಾದರೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ)ನಿಂದ ಮಿಲಿಯನ್ ಡಾಲರ್ ಬಹುಮಾನ ಮೊತ್ತವನ್ನು ಗಿಟ್ಟಿಸಿಕೊಳ್ಳಲಿದೆ.
ಐಸಿಸಿ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನ ಕಾಯ್ದುಕೊಳ್ಳುವ ತಂಡಕ್ಕೆ ಭಾರೀ ಬಹುಮಾನವನ್ನು ನೀಡಲಾಗುತ್ತದೆ. 2017ರ ಎಪ್ರಿಲ್ 1 ಐಸಿಸಿ ನೀಡುವ ಗರಿಷ್ಠ ಮೊತ್ತವನ್ನು ಗೆಲ್ಲಲು ಇರುವ ಅಂತಿಮ ದಿನಾಂಕವಾಗಿದೆ. ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಒಂದು ವೇಳೆ ಪುಣೆ ಏಕದಿನ ಪಂದ್ಯವನ್ನು ಗೆದ್ದುಕೊಂಡರೆ ಐಸಿಸಿ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನವನ್ನು ಭದ್ರಪಡಿಸಿಕೊಳ್ಳಲಿದೆ.
ವಿಶ್ವಶ್ರೇಷ್ಠ ರ್ಯಾಂಕಿನ ತಂಡಕ್ಕೆ ಐಸಿಸಿ ನೀಡುವ ಬಹುಮಾನ ಮೊತ್ತವನ್ನು 2015ರಲ್ಲಿ 500,000 ಡಾಲರ್‌ನಿಂದ ಮಿಲಿಯನ್ ಡಾಲರ್‌ಗೆ ದ್ವಿಗುಣಗೊಳಿಸಲಾಗಿತ್ತು.
ಭಾರತ ಹಾಗೂ ಆಸ್ಟ್ರೇಲಿಯ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದ್ದು, ಪ್ರವಾಸಿ ಆಸ್ಟ್ರೇಲಿಯಕ್ಕೆ ಐಸಿಸಿ ನೀಡುವ ಗರಿಷ್ಠ ಮೊತ್ತದ ಬಹುಮಾನ ಜಯಿಸುವ ಅವಕಾಶವಿದೆ. ಆದರೆ, ಭಾರತ ನಾಲ್ಕು ಟೆಸ್ಟ್ ಪಂದ್ಯಗಳ ಪೈಕಿ ಒಂದರಲ್ಲಿ ಜಯ ಸಾಧಿಸಿದರೆ ಅಗ್ರ ಸ್ಥಾನವನ್ನು ಉಳಿಸಿಕೊಳ್ಳಲಿದೆ. ಆಸ್ಟ್ರೇಲಿಯ ಅಗ್ರ ಸ್ಥಾನವನ್ನು ಪಡೆಯಬೇಕಾದರೆ ಭಾರತ ವಿರುದ್ಧ ಸರಣಿಯನ್ನು 3-0 ಅಂತರದಿಂದ ಜಯಿಸಬೇಕು.
ಪ್ರಸ್ತುತ ಆಸ್ಟ್ರೇಲಿಯ ತಂಡ ರ್ಯಾಂಕಿಂಗ್‌ನಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಇತ್ತೀಚೆಗೆ ಟೆಸ್ಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ಪರದಾಡುತ್ತಿದೆ. ಟೆಸ್ಟ್ ಸರಣಿಯನ್ನಾಡಲು ಶ್ರೀಲಂಕಾಕ್ಕೆ ತೆರಳಿದ್ದ ಆಸೀಸ್ 3-0 ಅಂತರದಿಂದ ಸೋಲುಂಡಿತ್ತು. ಕಳೆದ ವರ್ಷ ಸ್ವದೇಶದಲ್ಲಿ ದಕ್ಷಿಣ ಆಫ್ರಿಕದ ವಿರುದ್ಧ 2-1 ಅಂತರದಿಂದ ಸೋಲುಂಡಿದ್ದು, ಈ ಸೋಲಿನ ಬಳಿಕ ಭಾರೀ ಟೀಕೆಗೆ ಗುರಿಯಾಗಿತ್ತು.