​ಉಡುಪಿ ಪೂರ್ಣಪ್ರಜ್ಞಾ ಕಾಲೇಜು ವಿದ್ಯಾರ್ಥಿಗಳಿಂದ ಪ್ರತಿಭಟನೆ

Update: 2017-02-17 05:42 GMT

ಉಡುಪಿ, ಫೆ.17: ಉಪನ್ಯಾಸಕರೊಬ್ಬರನ್ನು ಕಾಲೇಜು ಆಡಳಿತ ಮಂಡಳಿಯು ಸೇವೆಯಿಂದ ಅಮಾನತುಗೊಳಿಸಿದೆ ಎಂದು ಆರೋಪಿಸಿ ಇಲ್ಲಿನ ಪೂರ್ಣಪ್ರಜ್ಞಾ ಪದವಿ ಕಾಲೇಜಿನ ವಿದ್ಯಾರ್ಥಿಗಳು ಇಂದು ಬೆಳಗ್ಗೆ ಕಾಲೇಜಿನ ಎದುರು ಪ್ರತಿಭಟನೆ ನಡೆಸಿದರು.

ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ ದುರ್ಗಾಪ್ರಸಾದ್ ಮಯ್ಯ ಅವರ ಮೇಲೆ ವೃಥಾರೋಪ ಹೊರಿಸಿ ಕಾಲೇಜು ಆಡಳಿತ ಮಂಡಳಿಯು ಅವರನ್ನು ಅಮಾನತುಗೊಳಿಸಿದೆ. ಆದರೆ ಅವರು ಅಂತಹ ಲೋಪ ಎಸಗಿಲ್ಲ ಎಂದಿರುವ ವಿದ್ಯಾರ್ಥಿಗಳು, ಮಯ್ಯರ ಅಮಾನತು ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ. ತರಗತಿಗಳನ್ನು ಬಹಿಷ್ಕರಿಸಿರುವ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಕಾಲೇಜಿನ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ವೇಳೆ ಸ್ಥಳಕ್ಕಾಗಮಿಸಿದ ಕಾಲೇಜು ಆಡಳಿತ ಮಂಡಳಿಯ ಡಾ.ಚಂದ್ರಶೇಖರ್ ಅವರು ವಿದ್ಯಾರ್ಥಿಗಳ ಮನವೊಲಿಸಲು ಪ್ರಯತ್ನಿಸಿದರು. ದುರ್ಗಾಪ್ರಸಾದ್ ಮಯ್ಯ ಅವರು ಪರೀಕ್ಷೆಗೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ್ದಾರೆ. ಪರೀಕ್ಷಾ ಪ್ರಶ್ನೆಪತ್ರಿಕೆಗಳನ್ನು ಸೋರಿಕೆ ಮಾಡಿದ್ದಾರೆ. ಅಲ್ಲದೆ ವಿದ್ಯಾರ್ಥಿಗಳು ಮುಂಚಿತವಾಗಿಯೇ ಉತ್ತರ ಪತ್ರಿಕೆಯನ್ನು ಸಿದ್ಧಪಡಿಸಿಕೊಂಡು ಬರಲು ಅವಕಾಶ ಕಲ್ಪಿಸಿದ್ದಾರೆ. ಈ ಎಲ್ಲಾ ತಪ್ಪಿಗೆ ಕ್ಷಮಾಪಣಾ ಪತ್ರ ಬರೆದುಕೊಡುವಂತೆ ಮಯ್ಯರನ್ನು ಒತ್ತಾಯಿಸಲಾಗಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳಲು ಆಡಳಿತ ಮಂಡಳಿ ಮುಂದಾಗಿದೆ ಎಂದು ತಿಳಿಸಿದರು.

ಆದರೆ ಚಂದ್ರಶೇಖರ್ ಅವರ ಆರೋಪವನ್ನು ತಳ್ಳಿ ಹಾಕಿದ ವಿದ್ಯಾರ್ಥಿಗಳು, ಮಯ್ಯ ಯಾವುದೇ ತಪ್ಪು ಮಾಡಿಲ್ಲ. ಆದ್ದರಿಂದ ಅವರ ಅಮಾನತನ್ನು ಕೂಡಲೇ ಹಿಂಪಡೆಯುವಂತೆ ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News