ಆಡಳಿತ ವಿಭಾಗಕ್ಕೆ ಪ್ರವೇಶಾವಕಾಶ ತಡೆದಿದ್ದರೆ ಸುಮ್ಮನಿದ್ದುದೇಕೆ ? : ಜೆಎನ್‌ಯುಗೆ ನ್ಯಾಯಾಲಯದ ಪ್ರಶ್ನೆ

Update: 2017-02-17 14:08 GMT

ಹೊಸದಿಲ್ಲಿ, ಫೆ.17: ಫೆ.9ರಿಂದ ವಿವಿಯ ಆಡಳಿತ ವಿಭಾಗ ಪ್ರವೇಶಿಸುವುದಕ್ಕೆ ವಿದ್ಯಾರ್ಥಿಗಳು ತಡೆ ಒಡ್ಡಿದ್ದರೆ ಇದುವರೆಗೂ ಯಾಕೆ ನ್ಯಾಯಾಲಯವನ್ನು ಸಂಪರ್ಕಿಸಿಲ್ಲ ಎಂದು ದಿಲ್ಲಿ ಹೈಕೋರ್ಟ್ ಜವಾಹರ್‌ಲಾಲ್ ನೆಹ್ರೂ ವಿಶ್ವವಿದ್ಯಾಲಯ (ಜೆಎನ್‌ಯು)ವನ್ನು ಪ್ರಶ್ನಿಸಿದೆ.

ತಮಗೆ ಉದ್ಯೋಗಕ್ಕೆ ಅರ್ಜಿ ಹಾಕಲು ಅಂಕಪಟ್ಟಿ ಮತ್ತು ಪ್ರಮಾಣಪತ್ರದ ಅಗತ್ಯವಿದ್ದು ಇವನು ್ನ ಒದಗಿಸಲು ನಿರ್ದೇಶನ ನೀಡುವಂತೆ ಕೋರಿ ವಿಶ್ವವಿದ್ಯಾಲಯದ ಐವರು ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ವಿ.ಕೆ.ರಾವ್ , ತಕ್ಷಣ ಇವನ್ನು ಒದಗಿಸುವಂತೆ ಜೆಎನ್‌ಯುಗೆ ಸೂಚಿಸಿದರು.

 ಇದಕ್ಕೆ ಉತ್ತರಿಸಿದ ಜೆಎನ್‌ಯು ಪ್ರತಿನಿಧಿ ವಕೀಲರಾದ ಮೋನಿಕಾ ಅರೋರಾ, ವಿದ್ಯಾರ್ಥಿಗಳ ಪ್ರತಿಭಟನೆಯ ಕಾರಣ ವಿವಿಯ ಆಡಳಿತ ವಿಭಾಗವನ್ನು ಪ್ರವೇಶಿಸಬೇಕಾದರೆ ಪೊಲೀಸರ ಸಹಕಾರ ಬೇಕಾಗುತ್ತದೆ. ಉಪಕುಲಪತಿ ಕೂಡಾ ತನ್ನ ಕಚೇರಿಯನ್ನು ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ ಎಂದರು.

ಇದುವರೆಗೂ ವಿವಿಯು ಈ ವಿಷಯದ ಬಗ್ಗೆ ಸುಮ್ಮನಿದ್ದುದು ಏಕೆ. ವಿವಿಯು ಸುಮ್ಮನಿದ್ದು ಬಿಟ್ಟರೆ, ವಿದ್ಯಾರ್ಥಿಗಳು ಕೇಳಿದ ದಾಖಲೆಗಳನ್ನು ಕೊಟ್ಟುಬಿಡಿ ಎಂದು ನಾನು ಆದೇಶಿಸುತ್ತೇನೆ ಅಷ್ಟೇ.. ಎಂದು ಹೇಳಿದ ನ್ಯಾಯಾಧೀಶರು, ಇದುವರೆಗೂ ಈ ವಿಷಯದ ಬಗ್ಗೆ ವೌನವಹಿಸಿದ್ದೇಕೆ ಎಂದು ವಿವಿಯಿಂದ ವಿವರಣೆ ಪಡೆಯುವಂತೆ ವಕೀಲರಿಗೆ ಸೂಚಿಸಿ, ವಿಚಾರಣೆಯನ್ನು ಫೆ.20ಕ್ಕೆ ಮುಂದೂಡಿದರು.

  ಜೆಎನ್‌ಯು ವಿವಿಯ ಕಾನೂನು ಮತ್ತು ನಿಯಮದನ್ವಯ ಆಡಳಿತ ಮತ್ತು ಶೈಕ್ಷಣಿಕ ಸಮುಚ್ಛಯದ 20 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಪ್ರತಿಭಟನೆ ನಡೆಸುವಂತಿಲ್ಲ. ಆದ್ದರಿಂದ ವಿವಿಯ ಆಡಳಿತ ವಿಭಾಗದ ಎದುರು ಪ್ರತಿಭಟನೆ ನಡೆಸುತ್ತಿರುವವರನ್ನು ತೆರವುಗೊಳಿಸಿ ಆಡಳಿತ ವಿಭಾಗ ಈ ಹಿಂದಿನಂತೆಯೇ ಕಾರ್ಯನಿರ್ವಹಿಸಲು ಅನುವು ಮಾಡಿಕೊಡಬೇಕು ಎಂದು ವಿದ್ಯಾರ್ಥಿಗಳು ತಮ್ಮ ಅರ್ಜಿಯಲ್ಲಿ ಕೋರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News