ವಿಶ್ವಾಸ ಮತಕ್ಕೆ ಮುನ್ನ ಸಿಎಂ ಪಳನಿಸ್ವಾಮಿಗೆ ವಿಪಕ್ಷ ನಾಯಕ ಸ್ಟಾಲಿನ್ ಸಲಹೆ ಏನು ಗೊತ್ತೇ ?

Update: 2017-02-17 14:11 GMT

ಚೆನ್ನೈ,ಫೆ.17: ಶನಿವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಕೋರಲಿರುವ ತಮಿಳುನಾಡು ಮುಖ್ಯಮಂತ್ರಿ ಇ.ಪಳನಿಸ್ವಾಮಿ ಅವರಿಗೆ ಪ್ರತಿಪಕ್ಷ ನಾಯಕ ಎಂ.ಕೆ.ಸ್ಟಾಲಿನ್ ಅವರು ಎರಡು ಸಲಹೆಗಳನ್ನು ನೀಡಿದ್ದಾರೆ. ತನ್ನತ್ತ ಮುಗುಳ್ನಗು ಬೀರಬೇಡಿ ಎನ್ನುವುದು ಮೊದಲ ಸಲಹೆಯಾಗಿದ್ದರೆ, ಎಎಡಿಎಂಕೆ ಪಕ್ಷದ ನೂತನ ಅಧಿನಾಯಕಿ ವಿ.ಕೆ.ಶಶಿಕಲಾ ಅವರಿಂದ ‘ರಿಮೋಟ್ ಕಂಟ್ರೋಲ್ಡ್ ’ನಾಯಕರಾಗಬೇಡಿ ಎನ್ನುವುದು ಎರಡನೇ ಸಲಹೆಯಾಗಿದೆ.

ಶಶಿಕಲಾ ಅವರು ಅಕ್ರಮ ಸಂಪತ್ತು ಪ್ರಕರಣದಲ್ಲಿ ಜೈಲು ಸೇರುವ ಮುನ್ನ ತನ್ನ ವಿರುದ್ಧ ಬಂಡೆದ್ದಿದ್ದ ಮಾಜಿ ಮುಖ್ಯಮಂತ್ರಿ ಒ.ಪಿ.ಪನ್ನೀರಸೆಲ್ವಂ ಅವರ ಹಲವಾರು ‘ದ್ರೋಹಗಳನ್ನು ’ಪಕ್ಷದ ಮುಂದಿಡುವಾಗ ಸೆಲ್ವಂ ವಿಧಾನಸಭೆಯಲ್ಲಿ ಸ್ಟಾಲಿನ್‌ರತ್ತ ಮುಗುಳ್ನಗು ಬೀರಿದ್ದನ್ನೂ ಸೇರಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸೆಲ್ವಂ, ಅದು ಅಪರಾಧವಾಗಿರಲಿಲ್ಲ. ಇನ್ನೋರ್ವ ಮನುಷ್ಯನತ್ತ ನಗು ಬೀರುವುದು ಮಾನವರನ್ನು ಪ್ರಾಣಿಗಳಿಂದ ಪ್ರತ್ಯೇಕಿಸಿರುವ ಹಲವು ಗುಣಗಳಲ್ಲಿ ಒಂದು ಎಂದು ತಿರುಗೇಟು ನೀಡಿದ್ದರು. ಈ ಹಿನ್ನೆಲೆಯಲ್ಲಿ ಸ್ಟಾಲಿನ್ ಸಲಹೆ ಹೊರಬಿದ್ದಿದೆ.

 ವಿಧಾನಸಭೆಯಲ್ಲಿ ಎಐಎಡಿಎಂಕೆ 134 ಶಾಸಕರನ್ನು ಹೊಂದಿದ್ದು, ಈ ಪ್ಯೆಕಿ 124 ಶಾಸಕರು ಶಶಿಕಲಾ ಬಣಕ್ಕೆ ಸೇರಿದವರಾಗಿದ್ದಾರೆ ಮತ್ತು ತನ್ಮೂಲಕ ಪಳನಿಸ್ವಾಮಿ ಅವರ ಬೆಂಬಲಿಗರಿಗರಾಗಿದ್ದಾರೆ. ಮುಖ್ಯಮಂತ್ರಿ ಪಟ್ಟವನ್ನುಳಿಸಿಕೊಳ್ಳಲು ಅವರಿಗೆ 118 ಮತ ಗಳು ಅಗತ್ಯವಿದ್ದು, ಹೆಚ್ಚುವರಿಯಾಗಿ ಆರು ಶಾಸಕರ ಬಲವನ್ನು ಹೊಂದಿದ್ದಾರೆ.

 ಶನಿವಾರದ ವಿಶ್ವಾಸಮತ ಕಲಾಪಕ್ಕೆ ಸಂಬಂಧಿಸಿದಂತೆ ತನ್ನ ರಾಜಕೀಯ ಕಾರ್ಯತಂತ್ರವನ್ನು ಸ್ಟಾಲಿನ್ ಬಾಯಿಬಿಟ್ಟಿಲ್ಲ. ಅವರ ಡಿಎಂಕೆ ಪಕ್ಷವು 89 ಶಾಸಕರನ್ನು ಹೊಂದಿದೆ.

ಪಳನಿಸ್ವಾಮಿ ಅವರು ತನ್ನ ಸಂಪುಟದ 30 ಸದಸ್ಯರೊಂದಿಗೆ ಗುರುವಾರ ರಾಜ್ಯದ 13ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News