×
Ad

ಪತ್ರಿಕಾಗೋಷ್ಠಿಯಿಡೀ ಪತ್ರಕರ್ತರ ಮೇಲೆ ಹರಿಹಾಯ್ದ ಟ್ರಂಪ್

Update: 2017-02-17 20:49 IST

ವಾಶಿಂಗ್ಟನ್, ಫೆ. 17: ಗುರುವಾರ ತನ್ನ ಪ್ರಥಮ ಒಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಹೆಚ್ಚಿನ ಸಮಯವನ್ನು ಪತ್ರಕರ್ತರ ಮೇಲೆ ದಾಳಿ ನಡೆಸಲು ವಿನಿಯೋಗಿಸಿದರು. 55 ಶೇಕಡ ಜನರು ತನ್ನನ್ನು ಅನುಮೋದಿಸಿರುವ ಸಮೀಕ್ಷೆಯ ಬಗ್ಗೆ ಪತ್ರಕರ್ತರು ಉಪೇಕ್ಷೆ ತೋರಿಸುತ್ತಿದ್ದಾರೆ ಎಂದು ಅವರು ಈ ಸಂದರ್ಭದಲ್ಲಿ ಆರೋಪಿಸಿದರು.

ಟ್ರಂಪ್ ಉಲ್ಲೇಖಿಸಿರುವ ಈ ಸಂಖ್ಯೆ ಇತರ ಹೆಚ್ಚಿನ ಸಮೀಕ್ಷೆಗಳಿಗೆ ತಾಳೆಯಾಗುವುದಿಲ್ಲ.ಬಳಿಕ ಅವರು ಪತ್ರಕರ್ತರ ಮೇಲೆ ಪರೋಕ್ಷವಾಗಿ ಹಾಗೂ ವೈಯಕ್ತಿಕವಾಗಿ ದಾಳಿ ನಡೆಸಿದರು. ಅಮೆರಿಕದ ಅಧ್ಯಕ್ಷರಾಗಿ ತನ್ನ ಮೊದಲ ವಾರಗಳ ವರದಿಗಾರಿಕೆ ಅನುಚಿತವಾಗಿದೆ ಎಂದು ಟ್ರಂಪ್ ಹೇಳಿದರು.

ಏಳು ಮುಸ್ಲಿಮ್ ಬಾಹುಳ್ಯದ ದೇಶಗಳ ನಿವಾಸಿಗಳಿಗೆ ಅಮೆರಿಕ ಪ್ರವೇಶ ನಿಷೇಧ, ಈ ನಿಷೇಧಕ್ಕೆ ಅಮೆರಿಕದ ನ್ಯಾಯಾಲಯಗಳು ನೀಡಿರುವ ತಡೆಯಾಜ್ಞೆ, ಕಾರ್ಮಿಕ ಕಾರ್ಯದರ್ಶಿ ಹುದ್ದೆಗೆ ತಾನು ಮಾಡಿದ ಆಯ್ಕೆಯಲ್ಲಿ ಮಾಡಬೇಕಾದ ಬದಲಾವಣೆ, ತನ್ನ ರಾಷ್ಟ್ರೀಯ ಭದ್ರತಾ ಸಲಹಾಕಾರ ನೀಡಿದ ರಾಜೀನಾಮೆ- ಇವೇ ಮುಂತಾದ ಹಲವಾರು ವಿಷಯಗಳ ಬಗ್ಗೆ ಪ್ರಸಕ್ತ ಚರ್ಚೆ ನಡೆಯುತ್ತಿವೆ. ಆದರೆ, ಅವರು ತನ್ನ ದೀಘ ಪತ್ರಿಕಾಗೋಷ್ಠಿಯ ಹೆಚ್ಚಿನ ಭಾಗವನ್ನು ಮಾಧ್ಯಮಗಳನ್ನು ತೆಗಳಲು ಮೀಸಲಿಟ್ಟರು.

ಟ್ರಂಪ್‌ರ ಅಧ್ಯಕ್ಷೀಯ ಪ್ರಚಾರ ತಂಡ ಮತ್ತು ರಶ್ಯದ ಪ್ರತಿನಿಧಿಗಳ ನಡುವಿನ ಸಂಪರ್ಕದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಯಿಂದ ನುಣುಚಿಕೊಂಡ ಅವರು, ಇದರ ಹೊಣೆಯನ್ನು ‘ಅಕ್ರಮ’ ಸರಕಾರಿ ಸೋರಿಕೆಗಳು ಮತ್ತು ‘ಅಪ್ರಾಮಾಣಿಕ’ ಮಾಧ್ಯಮ ವರದಿಗಳ ಮೇಲೆ ಹೊರಿಸಿದರು.

‘‘ಪತ್ರಿಕೆಗಳು ನಿಯಂತ್ರಣ ಮೀರಿವೆ’’ ಎಂದು ಹೇಳಿದ ಅವರು, ‘‘ಅಪ್ರಾಮಾಣಿಕತೆಯ ಮಟ್ಟ ನಿಯಂತ್ರಣ ಮೀರಿದೆ’’ ಎಂದರು.ಅವರ ಆಡಳಿತದಲ್ಲಿ ಎದ್ದಿರುವ ಬಿರುಗಾಳಿಯ ಕುರಿತು ಪತ್ರಿಕೆಗಳು ಮಾಡಿರುವ ವರದಿಗಳ ಬಗ್ಗೆ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಯಿಂದ ಕೋಪಗೊಂಡ ಟ್ರಂಪ್, ‘ಅಸಂಬದ್ಧ ಪ್ರಶ್ನೆ ಕೇಳಿರುವುದಕ್ಕಾಗಿ’ ಕುಳಿತುಕೊಳ್ಳುವಂತೆ ಸೂಚಿಸಿದರು.

‘ಟ್ರಂಪ್ ಒದರಿದರು’ ಎಂದು ನಾಳೆ ಅವರು ಬರೆಯುತ್ತಾರೆ!

‘‘ನಾಳೆ ಅವರು (ಪತ್ರಕರ್ತರು) ಹೇಳುತ್ತಾರೆ: ‘ಡೊನಾಲ್ಡ್ ಟ್ರಂಪ್ ಪತ್ರಿಕಾಗೋಷ್ಠಿಯಲ್ಲಿ ಒದರಿದರು ಮತ್ತು ಕೂಗಾಡಿದರು’ ಎಂದು. ನಾನು ಒದರುತ್ತಿಲ್ಲ ಮತ್ತು ಕೂಗಾಡುತ್ತಿಲ್ಲ. ನಾನು ನಿಮಗೆ ಹೇಳುತ್ತಿದ್ದೇನೆ ಅಷ್ಟೆ. ನೀವು ಅಪ್ರಾಮಾಣಿಕ ಜನರು. ಆದರೆ, ನಾನು ಒದರುತ್ತಿಲ್ಲ ಮತ್ತು ಕೂಗಾಡುತ್ತಿಲ್ಲ. ನಾನು ಹೀಗೆ ಮಾಡುವುದನ್ನು ಇಷ್ಟಪಡುತ್ತೇನೆ.

ನಾನು ಇದನ್ನು ಸಂತೋಷದಿಂದಲೇ ಮಾಡುತ್ತಿದ್ದೇನೆ’’ ಎಂದು ಡೊನಾಲ್ಡ್ ಟ್ರಂಪ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ರಶ್ಯ ಸಂಬಂಧ ಮಾಧ್ಯಮ ಸೃಷ್ಟಿಸಿದ ವಿವಾದ

ತನ್ನ ಸಹಾಯಕರು ಮತ್ತು ರಶ್ಯದ ನಡುವೆ ಸಂಪರ್ಕವಿದೆ ಎನ್ನುವುದಕ್ಕೆ ಸಂಬಂಧಿಸಿದ ವಿವಾದವು ವಿರೋಧಿ ಸುದ್ದಿ ಮಾಧ್ಯಮ ಸೃಷ್ಟಿಸಿರುವ ‘ಹಗರಣ’ವಾಗಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನ ಪ್ರಥಮ ಒಂಟಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಕಳೆದ ವರ್ಷ ನಡೆದ ಚುನಾವಣೆಗೆ ಮೊದಲು ತನ್ನ ಯಾವುದೇ ಸಹಾಯಕರು ರಶ್ಯದೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ ಎಂದರು.

‘‘ಸೋರಿಕೆಗಳು ನಡೆದದ್ದು ನಿಜ. ಆದರೆ ಸುದ್ದಿ ಸುಳ್ಳು’’ ಎಂದರು.

ಟ್ರಂಪ್‌ರ ಅಧ್ಯಕ್ಷೀಯ ಪ್ರಚಾರ ತಂಡವು ರಶ್ಯದ ಗುಪ್ತಚರ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿತ್ತು ಎಂಬ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ಅವರು ಮಾತನಾಡುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News