×
Ad

ಮ್ಯಾನ್ಮಾರ್: ರಖೈನ್ ರಾಜ್ಯದಲ್ಲಿ ಸೇನಾ ಕಾರ್ಯಾಚರಣೆ ಸ್ಥಗಿತ

Update: 2017-02-17 21:08 IST

ಯಾಂಗನ್ (ಮ್ಯಾನ್ಮಾರ್), ಫೆ. 17: ಮ್ಯಾನ್ಮಾರ್‌ನ ರಖೈನ್ ರಾಜ್ಯದ ಉತ್ತರ ಭಾಗದಲ್ಲಿ ನಡೆಸುತ್ತಿದ್ದ ‘ವಿಮೋಚನಾ ಕಾರ್ಯಾಚರಣೆ’ಯನ್ನು ಸೇನೆ ನಿಲ್ಲಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇದರೊಂದಿಗೆ ಮ್ಯಾನ್ಮಾರ್‌ನ ಭದ್ರತಾ ಪಡೆಗಳು ನಾಲ್ಕು ತಿಂಗಳುಗಳಿಂದ ನಡೆಸುತ್ತಿದ್ದ ಕಾರ್ಯಾಚರಣೆಯು ಸ್ಥಗಿತಗೊಂಡಂತಾಗಿದೆ.

ಈ ಕಾರ್ಯಾಚರಣೆಯ ಅವಧಿಯಲ್ಲಿ ಅಲ್ಪಸಂಖ್ಯಾತ ಮುಸ್ಲಿಮ್ ಸಮುದಾಯದ ನೂರಾರು ಮಂದಿ ಮೃತಪಟ್ಟಿದ್ದಾರೆ ಹಾಗೂ ಸುಮಾರು 70,000 ಮಂದಿ ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ ಎಂದು ಹೇಳಲಾಗಿದೆ.

ಪೊಲೀಸ್ ಗಡಿ ಠಾಣೆಗಳ ಮೇಲೆ ದಾಳಿ ನಡೆಸಿದವರನ್ನು ಪತ್ತೆಹಚ್ಚಲು ಸೇನೆಯು ಈ ಬೃಹತ್ ಕಾರ್ಯಾಚರಣೆ ನಡೆಸಿದೆ.

ಈ ನಾಲ್ಕು ತಿಂಗಳ ಕಾರ್ಯಾಚರಣೆಯ ವೇಳೆ, ಭದ್ರತಾ ಪಡೆಗಳು ರೊಹಿಂಗ್ಯ ಮುಸ್ಲಿಮರ ಮೇಲೆ ಯಾವ ರೀತಿಯಲ್ಲಿ ಅತ್ಯಾಚಾರ ನಡೆಸಿವೆ, ಅವರಿಗೆ ಹೇಗೆ ಚಿತ್ರ ಹಿಂಸೆ ನೀಡಿ ಕೊಂದಿವೆ ಹಾಗೂ ಅವರ ಮನೆಗಳನ್ನು ಹೇಗೆ ಸುಟ್ಟು ಹಾಕಿವೆ ಎಂಬ ಕುರಿತ ಭಯಾನಕ ವಿವರಗಳನ್ನು ಅಲ್ಲಿಂದ ತಪ್ಪಿಸಿಕೊಂಡು ಬಂದಿರುವವರು ಹೊರಜಗತ್ತಿಗೆ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಮ್ಯಾನ್ಮಾರ್ ಸೈನಿಕರು ರೊಹಿಂಗ್ಯ ಮುಸ್ಲಿಮರ ವಿರುದ್ಧ ‘ಯೋಜಿತ ರೀತಿಯಲ್ಲಿ ಭಯೋತ್ಪಾದನೆ’ಯನ್ನು ಹರಿಯಬಿಟ್ಟಿದ್ದಾರೆ ಹಾಗೂ ಇದು ಬಹುಶಃ ಮಾನವತೆಯ ವಿರುದ್ಧದ ಅಪರಾಧಕ್ಕೆ ಸಮನಾಗಬಹುದಾಗಿದೆ ಎಂಬುದಾಗಿ ಬಾಂಗ್ಲಾದೇಶದಲ್ಲಿರುವ ನಿರಾಶ್ರಿತರ ಹೇಳಿಕೆಗಳನ್ನು ಉಲ್ಲೇಖಿಸಿ ವಿಶ್ವಸಂಸ್ಥೆಯ ವರದಿಯೊಂದು ಹೇಳಿದೆ.

ಆದರೆ, ಹಿಂಸಾಚಾರದ ಕುರಿತು ವಿದೇಶಿ ಮಾಧ್ಯಮಗಳ ವರದಿ ಮತ್ತು ಮಾನವಹಕ್ಕು ಗುಂಪುಗಳು ನೀಡಿರುವ ಪುರಾವೆಗಳನ್ನು ಮ್ಯಾನ್ಮಾರ್ ‘ಸುಳ್ಳು’ ಎಂದು ಹೇಳಿ ತಳ್ಳಿಹಾಕಿದೆ ಹಾಗೂ ಈ ಪ್ರದೇಶಕ್ಕೆ ಭೇಟಿ ನೀಡಲು ಅವುಗಳಿಗೆ ಅವಕಾಶ ನಿರಾಕರಿಸಿದೆ.

ಸೇನಾ ಕಾರ್ಯಾಚರಣೆ ಕೊನೆಗೊಂಡಿದೆ ಹಾಗೂ ಶೋಧ ಕಾರ್ಯಾಚರಣೆ ನಡೆದ ಪ್ರದೇಶಗಳು ಈಗ ಪೊಲೀಸ್ ನಿಯಂತ್ರಣದಲ್ಲಿವೆ ಎಂದು ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಆಂಗ್ ಸಾನ್ ಸೂ ಕಿ ನೇತೃತ್ವದ ಮ್ಯಾನ್ಮಾರ್‌ನ ನಾಗರಿಕ ಸರಕಾರ ಬುಧವಾರ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News