ಎಣ್ಣೆ ನೀರಿಗಿಂತ ದಪ್ಪವಾಗಿದ್ದರೂ ಕಡಿಮೆ ಸಾಂದ್ರತೆ ಹೊಂದಿರುವುದೇಕೆ?

Update: 2017-02-17 17:31 GMT
-----------------------------

ತೆಳುವಾದ ದ್ರವ ಸುಲಭವಾಗಿ ಹರಿಯುತ್ತದೆ ಮತ್ತು ತಾನು ಹರಿಯುವ ಮೇಲ್ಮೈಗೆ ಅಂಟಿಕೊಳ್ಳುವುದಿಲ್ಲ. ಅದರಲ್ಲಿರುವ ಮಾಲೆಕ್ಯೂಲ್‌ಗಳು ಅಥವಾ ಕಣಗಳು ಒಂದಕ್ಕೊಂದು ಅಂಟಿಕೊಂಡಿರುವುದಿಲ್ಲ ಮತ್ತು ಘನ ಮೇಲ್ಮೈ ಮೇಲೂ ಅಂಟಿಕೊಳ್ಳುವುದಿಲ್ಲ.


ಆದರೆ ದ್ರವಗಳನ್ನು ಕಾಯಿಸಿದಾಗ ಹೆಚ್ಚಿನ ಪ್ರಕರಣಗಳಲ್ಲಿ ಅದು ಸುಲಭವಾಗಿ ಹರಿಯುತ್ತದೆ ಮತ್ತು ಹೆಚ್ಚು ತೆಳ್ಳಗಾಗುತ್ತದೆ ಎನ್ನುವುದು ನಮ್ಮ ಅನುಭವಕ್ಕೆ ಬಂದಿರುವ ವಿಷಯವಾಗಿದೆ.
 ಎಣ್ಣೆಯಲ್ಲಿಯ ಕಣಗಳು ಉದ್ದನೆಯ ಕಾರ್ಬನ್ ಸರಪಳಿಗಳಿಂದ ಮಾಡಲ್ಪಟ್ಟಿರುತ್ತವೆ ಮತ್ತು ಈ ಸರಪಳಿಗಳು ಸಾಲುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಬನ್ ಕಣಗಳನ್ನು ಹೊಂದಿರುತ್ತವೆ ಮತ್ತು ನಿರ್ದಿಷ್ಟ ಪ್ರಕರಣಗಳಲ್ಲಿ ಇವು ಕವಲಾಗಿ ಒಡೆದಿರುತ್ತವೆ. ಇಂತಹ ಕಣಗಳ ಸಂಚಿತ ರೂಪವೇ ಎಣ್ಣೆ.

ಎಣ್ಣೆ ಹರಿಯುತ್ತಿರುವಾಗ ಅದರಲ್ಲಿನ ಕಣಗಳು ಪರಸ್ಪರ ವಿರುದ್ಧವಾಗಿ ಚಲಿಸುತ್ತಿರುತ್ತವೆ. ಬೇರೆ ಬೇರೆ ಎಣ್ಣೆಗಳು ಬೇರೆ ಬೇರೆ ರೀತಿಯಲ್ಲಿ ಹರಿಯುತ್ತವೆ. ಎಣ್ಣೆಯ ಹರಿವು ನೀರು,ಮದ್ಯಸಾರ,ಪೆಟ್ರೋಲ್ ಇತ್ಯಾದಿ ತೆಳ್ಳಗಿನ ದ್ರವಗಳ ಹರಿವಿಗಿಂತ ಭಿನ್ನವಾಗಿರುತ್ತದೆ. ಎಣ್ಣೆಗೆ ಹೋಲಿಸಿದರೆ ಅವುಗಳು ಸರಳವಾದ ಕಣಗಳಿಂದ ಮಾಡಲ್ಪಟ್ಟಿವೆ ಮತ್ತು ಈ ಕಣಗಳು ಪರಸ್ಪರ ಹರಿವನ್ನು ಪ್ರತಿರೋಧಿಸುವುದಿಲ್ಲ. ಇನ್ನೊಂದೆಡೆ ವಸ್ತುವಿನ ಸಾಂದ್ರತೆಯು ಆ ವಸ್ತುವಿನ ನಿರ್ದಿಷ್ಟ ಪ್ರಮಾಣದಲ್ಲಿರುವ ದ್ರವ್ಯರಾಶಿಯ ಮೂಲಕ ನಿರ್ಧರಿಸಲ್ಪಡುತ್ತದೆ.

ಎಣ್ಣೆಯಲ್ಲಿನ ಉದ್ದನೆಯ ಸರಪಳಿ ಕಣಗಳು ನಿರ್ದಿಷ್ಟ ಜಾಗದಲ್ಲಿ ಪ್ಯಾಕ್ ಮಾಡಲ್ಪಟ್ಟಾಗ ಹೆಚ್ಚಿನ ಖಾಲಿ ಜಾಗವನ್ನು ಉಳಿಸಿರುತ್ತವೆ. ಇದನ್ನು ಪೇಪರ್ ಪಿನ್ ಅಥವಾ ಜೆಮ್ ಕ್ಲಿಪ್‌ಗಳನ್ನು ತುಂಬಿಸಿದ ಬೆಂಕಿಪೆಟ್ಟಿಗೆಗೆ ಹೋಲಿಸಬಹುದು. ಪೆಟ್ಟಿಗೆ ಪಿನ್‌ಗಳಿಂದ ತುಂಬಿದ್ದರೂ ಹೆಚ್ಚಿನ ಜಾಗ ಖಾಲಿಯಾಗಿಯೇ ಇದ್ದಿರುತ್ತದೆ. ಆದರೆ ಇದೇ ಬೆಂಕಿಪೆಟ್ಟಿಗೆಯಲ್ಲಿ ಸಣ್ಣ ಕಬ್ಬಿಣದ ಗುಂಡುಗಳನ್ನು ತುಂಬಿದರೆ ಅದು ಹೆಚ್ಚು ತೂಗುತ್ತದೆ,ಆದರೆ ಒಟ್ಟಾರೆ ಜಾಗದಲ್ಲಿ ಮಾತ್ರ ಯಾವುದೇ ಬದಲಾವಣೆಯಿರುವುದಿಲ್ಲ.


ಎಣ್ಣೆ ಮತ್ತು ನೀರಿನ ಹೋಲಿಕೆ ಈ ಬೆಂಕಿಪೆಟ್ಟಿಗೆಯ ಕಥೆಯಂತೆಯೇ ಇದೆ ಮತ್ತು ನೀರು ಎಣ್ಣೆಗಿಂತ ಹೆಚ್ಚಿ ಸಾಂದ್ರತೆಯನ್ನು ಹೊಂದಿರುತ್ತದೆ. ಎಣ್ಣೆಯಲ್ಲಿನ ಉದ್ದ ಸರಪಳಿಗಳು ಪರಸ್ಪರ ಸಿಕ್ಕಿ ಹಾಕಿಕೊಳ್ಳುತ್ತವೆ ಮತ್ತು ಹಲವಾರು ವಿಧಗಳ ಭೌತಿಕ ಶಕ್ತಿಗಳ ಪ್ರಭಾವಕ್ಕೊಳಗಾಗಿ ಪಾತ್ರೆಗೆ ಅಂಟಿಕೊಳ್ಳುತ್ತವೆ. ನೀರಿನಲ್ಲಿ ಇಂತಹ ಪ್ರಕ್ರಿಯೆ ಇರುವುದಿಲ್ಲ. ಹೀಗಾಗಿಯೇ ಎಣ್ಣೆ ನೀರಿಗಿಂತ ದಪ್ಪವಾಗಿರುತ್ತದೆ.

ಮಾಹಿತಿ : MARS Learning Centre, Mangalore. Ph: 9845563943

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News