ರಾಷ್ಟ್ರೀಯ ಗೀತೆಯ ಪರಿಕಲ್ಪನೆ ನಮ್ಮ ಸಂವಿಧಾನದಲ್ಲಿಲ್ಲ: ಸುಪ್ರೀಂ ಕೋರ್ಟ್
ಹೊಸದಿಲ್ಲಿ,ಫೆ.17: ಸಂವಿಧಾನದ ಪೀಠಿಕೆಯಲ್ಲಿ ಹೇಳಿರುವಂತೆ ಮಹಾನ್ ಗುರಿಗಳನ್ನು ಸಾಧಿಸಲು 51ಎ ವಿಧಿಯ ಆಶಯದಂತೆ ರಾಷ್ಟ್ರೀಯ ಗೀತೆ ಮತ್ತು ರಾಷ್ಟ್ರಧ್ವಜಕ್ಕೆ ಗೌರವವನ್ನು ಉತ್ತೇಜಿಸಲು ಮತ್ತು ವ್ಯಾಪಕಗೊಳಿಸಲು ರಾಷ್ಟ್ರೀಯ ನೀತಿಯೊಂದನ್ನು ರೂಪಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ತಿರಸ್ಕರಿಸಿತು.
ಬಿಜೆಪಿ ನಾಯಕ ಅಶ್ವಿನಿ ಕುಮಾರ ಉಪಾಧ್ಯಾಯ ಅವರ ಮನವಿಯನ್ನು ತಿರಸ್ಕರಿಸಿದ ನ್ಯಾಯಮೂರ್ತಿಗಳಾದ ದೀಪಕ ಮಿಶ್ರಾ, ಆರ್.ಭಾನುಮತಿ ಮತ್ತು ಮೋಹನ ಎಂ.ಶಾಂತನಗೌಡರ್ ಅವರನ್ನೊಳಗೊಂಡ ಪೀಠವು ಸಂವಿಧಾನದ 51ಎ(ಅ) ವಿಧಿಯು ರಾಷ್ಟ್ರೀಯ ಗೀತೆಯನ್ನು ಪ್ರಸ್ತಾಪಿಸಿಲ್ಲ, ಅದು ಕೇವಲ ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯನ್ನು ಮಾತ್ರ ಪ್ರಸ್ತಾಪಿಸಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿತು.
ಆದ್ದರಿಂದ ರಾಷ್ಟ್ರೀಯ ಗೀತೆಗೆ ಸಂಬಂಧಿಸಿದಂತೆ ಯಾವುದೇ ಚರ್ಚೆಯಲ್ಲಿ ಭಾಗಿಯಾಗಲು ನಾವು ಬಯಸುವುದಿಲ್ಲ ಎಂದೂ ಪೀಠವು ಸ್ಪಷಪಡಿಸಿತು.
ಅರ್ಜಿದಾರರ ಪರ ವಕೀಲ ವಿಕಾಸ ಸಿಂಗ್ ಅವರು, ಪೀಠವು ಚಲನಚಿತ್ರ ಮಂದಿರಗಳಲ್ಲಿ ರಾಷ್ಟ್ರಗೀತೆ ನುಡಿಸುವುದನ್ನು ಕಡ್ಡಾಯಗೊಳಿಸಿದ ರಿಟ್ ಅರ್ಜಿ ಮತ್ತು ಉಪಾಧ್ಯಾಯ ಅವರ ಅರ್ಜಿ ಒಂದೇ ಸ್ವರೂಪದ್ದಾಗಿವೆ ಎಂದು ಹೇಳಿದರಾದರೂ ಅದನ್ನೊಪ್ಪಿಕೊಳ್ಳದ ಪೀಠವು, ನಮ್ಮ ಹಿಂದಿನ ಆದೇಶವು ರಾಷ್ಟ್ರೀಯ ಗೀತೆ ಅಥವಾ ರಾಷ್ಟ್ರಧ್ವಜಕ್ಕೆ ಸಂಬಂಧಿಸಿಲ್ಲ ಎಂದು ಹೇಳಿತು.