ಟ್ರಂಪ್ ಆಹ್ವಾನ ಬಂದರೆ ತಪ್ಪಿಸಿಕೊಳ್ಳುವ ಅಮೆರಿಕನ್ ಸಿಇಒಗಳು!
ವಾಶಿಂಗ್ಟನ್, ಫೆ. 18: ಹಿಂದೆ ಶ್ವೇತಭವನಕ್ಕೆ ಬರುವಂತೆ ಕರೆಬಂದರೆ, ಅದು ತಮಗೆ ಸಿಕ್ಕಿದ ಉನ್ನತ ಗೌರವ ಎಂಬುದಾಗಿ ಅಮೆರಿಕದ ಉನ್ನತ ವಾಣಿಜ್ಯ ಸಂಸ್ಥೆಗಳ ಮುಖ್ಯಸ್ಥರು (ಸಿಇಒಗಳು) ಭಾವಿಸುತ್ತಿದ್ದರು. ಈಗ ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಒಂದು ತಿಂಗಳಾಗುತ್ತಿರುವಾಗ, ಶ್ವೇತಭವನಕ್ಕೆ ಕರೆ ಬಂದರೆ, ತಪ್ಪಿಸಿಕೊಳ್ಳುವುದು ಹೇಗೆ ಎಂಬುದಾಗಿ ಸಿಇಒಗಳು ಯೋಚಿಸುತ್ತಿದ್ದಾರೆ!
‘‘ಸಿಇಒಗಳು ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ನಾವು ಅಧ್ಯಕ್ಷರೊಂದಿಗೆ ಸೌಜನ್ಯದಿಂದ ವರ್ತಿಸಬೇಕಾಗುತ್ತದೆ. ಯಾಕೆಂದರೆ ನಮ್ಮದು ಸಾರ್ವಜನಿಕ ಕಂಪೆನಿ ಹಾಗೂ ನಾವು ಶೇರುದಾರರನ್ನು ಹೊಂದಿದ್ದೇವೆ. ತಮಗೆ ಸರಿ ಎನಿಸಿದ್ದನ್ನು ಅವರು ಹೇಳುತ್ತಾರೆ. ಅದನ್ನು ನಾವು ಮಾಡಲು ಹೊರಟರೆ ನಾವು ಆರ್ಥಿಕವಾಗಿ ಸರಿಯಾದ ದಿಕ್ಕಿನಲ್ಲಿ ಹೋಗಲು ಸಾಧ್ಯವಾಗುವುದಿಲ್ಲ. ನಮ್ಮ ರಾಜಕೀಯ ನಿಲುವುಗಳು ಏನೇ ಆಗಿರಬಹುದು’’ ಎಂದು ‘ಡಲ್ಲಾಸ್ ಮಾವೆರಿಕ್ಸ್’ನ ಮಾಲೀಕ ಮಾರ್ಕ್ ಕ್ಯೂಬನ್ ‘ಫೋರ್ಟ್ ವರ್ತ್ ಸ್ಟಾರ್-ಟೆಲಿಗ್ರಾಂ’ಗೆ ಹೇಳಿದ್ದಾರೆ.
ಬಿಲಿಯಾಧಿಪತಿ ಹೂಡಿಕೆದಾರ ಹಾಗೂ ರಿಯಲಿಟಿ ಟಿವಿ ಕಾರ್ಯಕ್ರಮ ‘ಶಾರ್ಕ್ ಟ್ಯಾಂಕ್’ನ ತಾರೆಯಾಗಿರುವ ಕ್ಯೂಬನ್ ಟ್ರಂಪ್ ಜೊತೆಗೆ ಟ್ವಿಟರ್ ಸಮರದಲ್ಲಿ ತೊಡಗಿದ್ದಾರೆ.
ಹೊಸದಾಗಿ ವಾಗ್ದಾಳಿ ನಡೆಸಿರುವ ಟ್ರಂಪ್, ‘‘ಕ್ಯೂಬನ್ ನನಗೆ ತುಂಬಾ ಬೆಂಬಲ ನೀಡಿದ್ದಾರೆ ಆದರೆ ಅವರ ಎಲ್ಲ ಕರೆಗಳನ್ನು ಸ್ವೀಕರಿಸಲು ನನಗೆ ಆಸಕ್ತಿಯಿರಲಿಲ್ಲ’’ ಎಂದು ಟ್ವೀಟ್ ಮಾಡಿದ್ದಾರೆ.
‘‘ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಲು ಅವರು ಅಷ್ಟೇನೂ ಬುದ್ಧಿವಂತರಲ್ಲ’’ ಎಂಬುದಾಗಿ ಟ್ರಂಪ್ ಇನ್ನೊಂದು ಟ್ವೀಟ್ ಮಾಡಿದ್ದಾರೆ.
ಟ್ರಂಪ್‌ರಿಂದ ಬರುವ ಆಹ್ವಾನ ಎರಡು ಅಲಗಿನ ಕತ್ತಿಯಂತೆ, ಯಾಕೆಂದರೆ ಜನರು ಆಳವಾಗಿ ವಿಭಜನೆಗೊಂಡಿದ್ದಾರೆ ಎಂದು ಯೇಲ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನ ಪ್ರೊಫೆಸರ್ ಜೆಫ್ರಿ ಸೋನನ್‌ಫೀಲ್ಡ್ ಹೇಳುತ್ತಾರೆ.