×
Ad

ಬಿಜೆಪಿ ಶಾಸಕನ ಅಣಿಮುತ್ತು : " ಪ್ರಾಮಾಣಿಕ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ ! "

Update: 2017-02-18 21:17 IST

ಹೊಸದಿಲ್ಲಿ,ಫೆ.18: ರೈತರ ಆತ್ಮಹತ್ಯೆಗಳನ್ನು ವಿಶಾಲ ಸಾರ್ವಜನಿಕ ಹಿತಾಸಕ್ತಿಯ ರಾಷ್ಟ್ರೀಯ ಸಮಸ್ಯೆಯೆಂದು ಬಣ್ಣಿಸಿರುವ ಸರ್ವೋಚ್ಚ ನ್ಯಾಯಾಲಯವು ಅದಕ್ಕಾಗಿ ರಾಷ್ಟ್ರೀಯ ನೀತಿಯೊಂದನ್ನು ರೂಪಿಸುವಂತೆ ಜನವರಿಯಲ್ಲಿ ಕರೆ ನೀಡಿತ್ತು. ಆದರೆ ಈ ಬಗ್ಗೆ ಎಲ್ಲ ರಾಜಕಾರಣಿಗಳಿಗೂ ಕಾಳಜಿಯಿದ್ದಂತಿಲ್ಲ.

ಮಧ್ಯಪ್ರದೇಶದ ಬಿಜೆಪಿ ಶಾಸಕ ರಾಮೇಶ್ವರ ಶರ್ಮಾ ಅವರಂತೂ ಸಂವೇದನೆಯನ್ನೇ ಕಳೆದುಕೊಂಡಿರುವಂತಿದೆ. ಸಭೆಯೊಂದರಲ್ಲಿ ಮಾತನಾಡಿದ ಈ ಶಾಸಕ ಮಹಾಶಯರು ಪ್ರಾಮಾಣಿಕ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ಸಾಯುತ್ತಿರುವವರು ಮುಖ್ಯವಾಗಿ ರೈತರೇ ಅಲ್ಲ, ಸಬ್ಸಿಡಿಗಳನ್ನು ನುಂಗುವುದನ್ನೇ ದಂಧೆಯನ್ನಾಗಿ ಮಾಡಿಕೊಂಡವರು ಎಂದು ನಾಲಿಗೆ ಹರಿಯಬಿಟ್ಟಿದ್ದಾರೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಘಟಕದ 2014ರ ವರದಿಯಂತೆ ಇಡೀ ದೇಶದಲ್ಲಿ 5,650 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೆ ಅದರಲ್ಲಿ ಶಾಸಕ ಶರ್ಮಾರ ರಾಜ್ಯದ ರೈತರ ಸಂಖ್ಯೆ 826 ಆಗಿದೆ.

ಶ್ರಿಮಂತ ರೈತರು ಮತ್ತು ಅಧಿಕಾರಿಗಳು ಶಾಮೀಲಾಗಿ ಕೃಷಿಯ ಗೌರವಕ್ಕೇ ಮಸಿ ಬಳಿಯುತ್ತಿದ್ದಾರೆ ಎಂದೂ ಆರೋಪಿಸಿರುವ ಶರ್ಮಾ, ನಿಜವಾದ ರೈತ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ಅಕ್ರಮ ಮಾರ್ಗಗಳ ಮುಲಕ ದುಡ್ಡು ಮಾಡಿದವರು, ಸಾಲ ಮಾಡಿಕೊಂಡವರು ಮತ್ತು ಮದ್ಯಪಾನಿಗಳು ರೈತ ಸಮುದಾಯದ ಮಾನ ಕಳೆದಿದ್ದಾರೆ ಎಂದೂ ಹೇಳಿದ್ದಾರೆ.

2016ರಲ್ಲಿ ಮುಂಬೈನ ಬಿಜೆಪಿ ಸಂಸದ ಗೋಪಾಲ ಶೆಟ್ಟಿ ಅವರು, ರೈತರ ಆತ್ಮಹತ್ಯೆ ಒಂದು ಫ್ಯಾಶನ್ ಆಗಿಬಿಟ್ಟಿದೆ ಎಂದು ಅಣಕವಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News