ಚೆನ್ನೈಯಲ್ಲಿ ಸ್ಟಾಲಿನ್ ಬಂಧನ,ರಾಜ್ಯಾದ್ಯಂತ ಹಿಂಸಾಚಾರ

Update: 2017-02-18 15:52 GMT

ಚೆನ್ನೈ,ಫೆ.18: ಶನಿವಾರ ತಮಿಳುನಾಡು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಎಡಪ್ಪಾಡಿ ಕೆ.ಪಳನಿಸ್ವಾಮಿ ಅವರ ವಿಶ್ವಾಸಮತ ಗೆಲುವನ್ನು ಪ್ರತಿಭಟಿಸಿ ಇಲ್ಲಿನ ಮರೀನಾ ಬೀಚ್‌ನಲ್ಲಿ ಉಪವಾಸ ಮುಷ್ಕರಕ್ಕಿಳಿದಿದ್ದ ಪ್ರತಿಪಕ್ಷ ನಾಯಕ ಎಂ.ಕೆ.ಸ್ಟಾಲಿನ್ ಅವರನ್ನು ಪೊಲೀಸರು ಬಂಧಿಸಿದರು.

ಡಿಎಂಕೆ ಕಾರ್ಯಾಧ್ಯಕ್ಷರಾಗಿರುವ ಸ್ಟಾಲಿನ್ ಪಕ್ಷದ ಕಾರ್ಯಕರ್ತರೊಂದಿಗೆ ಮರೀನಾ ಬೀಚ್‌ನಲ್ಲಿರುವ ಗಾಂಧಿ ಪ್ರತಿಮೆಯ ಬಳಿ ಉಪವಾಸ ಮುಷ್ಕರ ಕೈಗೊಂಡಿದ್ದರು. ಅವರನ್ನು ಅಲ್ಲಿಂದ ತೆರವುಗೊಳಿಸಲು ಬಂದಿದ್ದ ಪೊಲೀಸರನ್ನು ತಡೆಯಲು ಬೆಂಬಲಿಗರು ದಾರಿಯಲ್ಲಿ ಅಡ್ಡಿಗಳನ್ನೊಡ್ಡಿದ್ದರು.

ವಿಧಾನಸಭೆಯಿಂದ ಡಿಎಂಕೆ ಸದಸ್ಯರನ್ನು ತೆರವುಗೊಳಿಸಿದ ಮತ್ತು ವಿಶ್ವಾಸಮತ ನಿರ್ಣಯ ಅಂಗೀಕಾರಗೊಂಡ ಬಳಿಕ ತಮಿಳುನಾಡಿನ ವಿವಿಧೆಡೆಗಳಲ್ಲಿ ಹಿಂಸಾಚಾರ ಭುಗಿಲ್ಲೆದ್ದಿತು. ಅಂಬೂರು ಮತ್ತು ರಾಣಿಪೇಟ್ ಸೇರಿದಂತೆ ಚೆನ್ನೈ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಹಲವೆಡೆಗಳಲಲಿ ಡಿಎಂಕೆ ಕಾರ್ಯಕರ್ತರು ರಸ್ತೆ ತಡೆ ನಡೆಸಿದರು. ತಿರುವಣ್ಣಾಮಲೈ ಮತ್ತು ಇತರ ಕಡೆಗಳಲ್ಲಿ ಸ್ಪೀಕರ್ ಧನಪಾಲ್ ಅವರ ಪ್ರತಿಕೃತಿಯನ್ನು ದಹಿಸಲಾಯಿತು.

ಬೃಹತ್ ಚೆನ್ನೈ ಮಹಾನಗರ ಪಾಲಿಕೆಯ ಮಾಜಿ ಮೇಯರ್ ಎಂ.ಸುಬ್ರಮಣಿಯನ್ ಸೇರಿದಂತೆ ಡಿಎಂಕೆ ಕಾರ್ಯಕರ್ತರು ಸರ್ದಾರ್ ಪಟೇಲ್ ರಸ್ತೆಯಲ್ಲಿ ಧರಣಿ ನಡೆಸಿ ವಾಹನಗಳ ಸಂಚಾರಕ್ಕೆ ತಡೆಯೊಡ್ಡಿದರು.

 ಮಧ್ಯಾಹ್ನ ಒಂದು ಗಂಟೆಗೆ ವಿಧಾನಸಭೆಯು ಮರು ಸಮಾವೇಶಗೊಂಡಾಗ ಸ್ಪೀಕರ್ ಮೊಸಳೆ ಕಣ್ನೀರು ಸುರಿಸಿದ್ದರು ಎಂದ ಸ್ಟಾಲಿನ್, ಅವರು ತನ್ನ ಶರ್ಟ್‌ನ್ನು ತಾನೇ ಹರಿದುಕೊಂಡಿದ್ದರು ಎಂದು ಆರೋಪಿಸಿದರು. ಸದನದಲ್ಲಿ ಗದ್ದಲವುಂಟಾದ ಬಗ್ಗೆ ತಾನು ವಿಷಾದಿಸುತ್ತೇನೆ ಮತ್ತು ತಿಳಿದೋ ತಿಳಿಯದೆಯೋ ಡಿಎಂಕೆ ಸದಸ್ಯರು ಯಾವುದೇ ತಪ್ಪು ಮಾಡಿದ್ದರೆ ಅದರ ಹೊಣೆಯನ್ನು ತಾನೇ ಹೊರುತ್ತೇನೆ ಎಂದು ತಾನು ಸ್ಪೀಕರ್‌ಗೆ  ತಿಳಿಸಿದ್ದೆ ಎಂದರು.

  ಸದನದಲ್ಲಿ ಭದ್ರತಾ ಸಿಬ್ಬಂದಿಗಳು ಮತ್ತು ಪೊಲೀಸರು ಪಕ್ಷದ ಶಾಸಕರನ್ನು ಥಳಿಸಿದ್ದರು ಎಂದು ದೂರಿದ ಅವರು,ನನಗೆ ಈ ಹಿಂದೆ ಘಟನೆಯೊಂದರಲ್ಲಿ ಒಳಪೆಟ್ಟು ಬಿದ್ದಿತ್ತು. ಅವರು ನಮ್ಮನ್ನು ಥಳಿಸಿ ಚಿತ್ರಹಿಂಸೆ ನೀಡಿದರು ಎಂದರು.

ವಿಶ್ವಾಸಮತ ನಿರ್ಣಯ ಅಂಗೀಕಾರಗೊಂಡ ವಿಧಾನಕ್ಕೆ ಅಸಮ್ಮತಿ ವ್ಯಕ್ತಪಡಿಸಿ ಡಿಎಂಕೆ ಶಾಸಕರು ಸ್ಪೀಕರ್‌ಗೆ ಪತ್ರ ಸಲ್ಲಿಸಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News