×
Ad

ಬೆತ್ತದೇಟು ತಿಂದಿದ್ದ ವಿದ್ಯಾರ್ಥಿಗೆ ಶಿಕ್ಷಕಿಯ ವೇತನ ನೀಡುವಂತೆ ಶಾಲೆಗೆ ಆದೇಶ

Update: 2017-02-18 23:52 IST

ಚಂಡಿಗಡ,ಫೆ.18: ಇಲ್ಲಿಯ ಸೆಕ್ಟರ್ 20ರಲ್ಲಿರುವ ಆದರ್ಶ ಪಬ್ಲಿಕ್ ಸ್ಕೂಲ್‌ನಲ್ಲಿ ನಾಲ್ಕನೇ ತರಗತಿಯ ವಿದ್ಯಾರ್ಥಿಯನ್ನು ಬೆತ್ತದಿಂದ ಥಳಿಸಿದ್ದ ತಪ್ಪಿಗಾಗಿ ಶಿಕ್ಷಕಿ ಒಂದು ತಿಂಗಳ ವೇತನವನ್ನು ಕಳೆದುಕೊಳ್ಳುವಂತಾಗಿದೆ. ಆರೋಪಿ ಶಿಕ್ಷಕಿಯ ಒಂದು ತಿಂಗಳ ವೇತನವನ್ನು ಸಂತ್ರಸ್ತ ವಿದ್ಯಾರ್ಥಿಗೆ ನೀಡುವಂತೆ ಮತ್ತು ಆಕೆಯ ವಿರುದ್ಧ ಶಿಸ್ತು ಕ್ರಮವನ್ನು ಜರಗಿಸುವಂತೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಶಾಲೆಯ ಅಧಿಕಾರಿಗಳಿಗೆ ಆದೇಶಿಸಿದೆ. ವಿದ್ಯಾರ್ಥಿಗೆ ನೀಡಲಾದ ಚೆಕ್‌ನ ಪ್ರತಿಯೊಂದಿಗೆ ಕ್ರಮಾನುಷ್ಠಾನ ವರದಿಯನ್ನೂ ತನಗೆ ಸಲ್ಲಿಸುವಂತೆ ಅದು ಸೂಚಿಸಿದೆ. ಶಾಲೆಗಳಲ್ಲಿ ಮಕ್ಕಳಿಗೆ ಥಳಿಸುವುದನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಂಡರೆ ಮಾತ್ರ ಪಾಠ ಕಲಿಸಲು ಸಾಧ್ಯ ಎಂದು ಆಯೋಗದ ಸದಸ್ಯ ಪ್ರಮೋದ್ ಶರ್ಮಾ ಹೇಳಿದರು.

9ರ ಹರೆಯದ ವಿದ್ಯಾರ್ಥಿಯ ತಂದೆ ರವಿಕಾಂತ್ ಶಿಕ್ಷಕಿ ರೀನಾ ಗುಲೇರಿಯಾ ವಿರುದ್ಧ ಆಯೋಗಕ್ಕೆ ದೂರು ಸಲ್ಲಿಸಿದ್ದರು. ತನ್ನ ಮಗ ಪರೀಕ್ಷೆಯಲ್ಲಿ ತರಗತಿಗೇ ಮೊದಲಿಗನಾಗಿದ್ದರೂ ಶಿಕ್ಷಕಿ ಆತನನ್ನು ಥಳಿಸಿದ್ದಾರೆ ಎಂದು ಅವರು ಆರೋಪಿಸಿದ್ದರು.
ಬಾಲಕ ಶೂನ್ಯ ಅಂಕವನ್ನು ಗಳಿಸಿದ್ದಾನೆ ಎಂಬ ತಪ್ಪು ಗ್ರಹಿಕೆಯಿಂದ ತಾನು ಆತನನ್ನು ಥಳಿಸಿದ್ದೆ. ಆದರೆ ಶೂನ್ಯ ಅಂಕ ಗಳಿಸಿದ್ದ ವಿದ್ಯಾರ್ಥಿಯೇ ಬೇರೆ ಎನ್ನುವುದು ತನಗೆ ನಂತರ ತಿಳಿದುಬಂದಿತ್ತು ಎಂದು ಗುಲೇರಿಯಾ ಪ್ರಾಂಶುಪಾಲರ ಎದುರು ಒಪ್ಪಿಕೊಂಡಿದ್ದರು.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News