ವಲಯ ಒಕ್ಕೂಟಗಳ ಪದಗ್ರಹಣ-ಸಾಧನಾ ಸಮಾವೇಶ

Update: 2017-02-18 18:37 GMT

ಬೆಳ್ತಂಗಡಿ, ಫೆ.18: ಸಮಾಜದ ಪ್ರತಿಯೊಂದು ಕ್ಷೇತ್ರವೂ ಬಲಿಷ್ಠವಾಗಿರಬೇಕು ಎಂಬ ಉದ್ದೇಶದಿಂದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದ್ದು, ಪರಿಣಾಮಕಾರಿ ಅನುಷ್ಠಾನ ಆಗಿದೆ. ಇದಕ್ಕೆ ಒಕ್ಕೂಟಗಳ ಸದಸ್ಯರು ಹಾಗೂ ಯೋಜನೆಯ ಪ್ರತಿನಿಧಿಗಳೇ ಕಾರಣ ಎಂದು ಉಜಿರೆ ಎಸ್‌ಡಿಎಂ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಡಿ. ಸುರೇಂದ್ರ ಕುಮಾರ್ ಹೇಳಿದರು.

ಅವರು ಶನಿವಾರ ನಾರಾವಿಯಲ್ಲಿ ಧ.ಗ್ರಾ. ಯೋಜನೆ ನಾರಾವಿ ವಲಯ, ಪ್ರಗತಿ ಬಂಧು, ಜ್ಞಾನವಿಕಾಸ, ಸ್ವಸಹಾಯ ಸಂಘಗಳ ಒಕ್ಕೂಟಗಳು, ಜನಜಾಗೃತಿ ವೇದಿಕೆ ಹಾಗೂ ಸೂರ್ಯನಾರಾಯಣ ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ನಡೆದ ನಾರಾವಿ ವಲಯ ಒಕ್ಕೂಟಗಳ ಪದಗ್ರಹಣ ಮತ್ತು ಸಾಧನಾ ಸಮಾವೇಶ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಧ.ಗ್ರಾ. ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್. ಮಂಜುನಾಥ್ ಮಾತನಾಡಿ, ಯುವ ಜನಾಂಗವನ್ನು ಯೋಜನೆಯತ್ತ ಆಕರ್ಷಿಸುವ ನಿಟ್ಟಿನಲ್ಲಿ ಯುವಕ-ಯುವತಿಯರ ಸ್ವಸಹಾಯ ಸಂಘಗಳನ್ನು ಜಾರಿಗೆ ತರುವ ಬಗ್ಗೆ ಡಾ.ಹೆಗ್ಗಡೆಯವರು ಚಿಂತನೆಯಲ್ಲಿದ್ದಾರೆ. ಇದಕ್ಕೆ ಈಗಿರುವ ಒಕ್ಕೂಟಗಳು ಪ್ರೇರಣೆಯಾಗಬೇಕಿದೆ ಎಂದ ಅವರು, ನಾರಾವಿ ಅತ್ಯುತ್ತಮ ಒಕ್ಕೂಟಗಳಿರುವ ವಲಯವಾಗಿದ್ದು, ಆರ್ಥಿಕ ಸ್ವಾವಲಂಬನೆ, ಸಾಮಾಜಿಕ ಚಿಂತನೆ, ವೈಯಕ್ತಿಕ ಅಭಿವೃದ್ಧಿಗೆ ಯೋಜನೆ ಹೆಚ್ಚಿನ ಒತ್ತು ನೀಡಿದೆ ಎಂದರು.

ನಾರಾವಿ ಸೂರ್ಯನಾರಾಯಣ ದೇವಸ್ಥಾನದ ಆಡಳಿತ ಮಂಡಳಿ ಸಮಿತಿ ಅಧ್ಯಕ್ಷ ಶ್ರೀನಿವಾಸ ಕಿಣಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ನಾರಾವಿ ಗ್ರಾಪಂ ಅಧ್ಯಕ್ಷ ರವೀಂದ್ರ ಪೂಜಾರಿ, ತಾಲೂಕು ಯೋಜನಾಧಿಕಾರಿ ರೂಪಾ ಜಿ. ಜೈನ್, ವೈದ್ಯಾಧಿಕಾರಿ ಡಾ.ಶೀತಲ್ ಕುಮಾರ್, ಒಕ್ಕೂಟಗಳ ವಲಯಾಧ್ಯಕ್ಷ ಗೋಪಾಲ ಪೂಜಾರಿ, ಜನಜಾಗೃತಿ ವೇದಿಕೆಯ ಅಧ್ಯಕ್ಷ ಜಯರಾಜ್ ಹೆಗ್ಡೆ ಹಾಗೂ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸನ್ಮ್ಮಾನ: ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ನಿರೀಕ್ಷಾ, ಜ್ಯೋತಿ, ರಾಮಶೆಟ್ಟಿ, ಡೀಕಯ್ಯ ಪೂಜಾರಿ, ಸುಧಾಕರ ಕಾಶಿಪಟ್ಣ, ಸ್ಯಾಕ್ಸೋಫೋನ್‌ವಾದಕ ತ್ರಿವಳಿ ಸಹೋದರಿಯರಾದ ಶ್ರೇಜಾ, ತುಳಸಿ ಹಾಗೂ ಜ್ಯೋತಿ ಅವರನ್ನು ಸನ್ಮಾನಿಸಲಾಯಿತು.

ನಾರಾವಿ ವಲಯ ಮೇಲ್ವಿಚಾರಕ ಬಾಲಕೃಷ್ಣ ಗೌಡ ಸಾಧನಾ ವರದಿ ವಾಚಿಸಿದರು. ಸೇವಾಪ್ರತಿನಿಧಿ ಶಶಿಧರ ಕುಲಾಲ್ ಸಂದೇಶ ಪತ್ರ ವಾಚಿಸಿ ಸದಾನಂದ ಬಂಗೇರ ಸ್ವಾಗತಿಸಿ, ಶುಭರಾಜ್ ಹೆಗ್ಡೆ ವಂದಿಸಿದರು. ಆಂತರಿಕ ಲೆಕ್ಕಪರಿಶೋಧಕ ಸುಬ್ರಾಯ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News