ಪುರಸಭೆ, ಸಜಿಪನಡು ಗ್ರಾಪಂನಿಂದ ಮಹತ್ವದ ಸಭೆಗೆ ನಿರ್ಧಾರ: ಆಳ್ವ

Update: 2017-02-18 18:39 GMT

ಬಂಟ್ವಾಳ, ಫೆ.18: ಪುರಸಭೆಯಿಂದ ಬಂಟ್ವಾಳ ತಾಲೂಕಿನ ಸಜಿಪನಡು ಗ್ರಾಮದ ಕಂಚಿನಡ್ಕ ಪದವಿನಲ್ಲಿ ನಿರ್ಮಾಣ ಹಂತದಲ್ಲಿರುವ ತ್ಯಾಜ್ಯ ನಿರ್ವಹಣಾ ಘಟಕದ ಕುರಿತಂತೆ ತಪ್ಪುಕಲ್ಪನೆ ನಿವಾರಿಸುವ ಸಲುವಾಗಿ ಪುರಸಭೆ ಮತ್ತು ಸ್ಥಳೀಯ ಗ್ರಾಪಂ ಜಂಟಿಯಾಗಿ ಶೀಘ್ರದಲ್ಲೇ ಮಹತ್ವದ ಸಭೆೆಯೊಂದನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ಪುರಸಭಾಧ್ಯಕ್ಷ ಪಿ.ರಾಮಕೃಷ್ಣ ಆಳ್ವ ತಿಳಿಸಿದ್ದಾರೆ. 

ಪುರಸಭಾ ಕಚೇರಿಯಲ್ಲಿ ಶನಿವಾರ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತ್ಯಾಜ್ಯ ಸಂಸ್ಕರಣಾ ಘಟಕ ಬಗ್ಗೆ ಪ್ರಾತ್ಯಕ್ಷಿಕೆ ಮಾಡುವ ಮೂಲಕ ಸ್ಥಳೀಯರಲ್ಲಿರುವ ತಪ್ಪು ಕಲ್ಪನೆೆಯನ್ನು ಹೋಗಲಾಡಿಸಲು ಪ್ರಯತ್ನಿಸಲಾಗುವುದು. ಕಾಮಗಾರಿ ಮುಂದುವರಿಸಲು ಸ್ಥಳೀಯ ಗ್ರಾಪಂ ಆಡಳಿತದೊಂದಿಗೆ ಮಹತ್ವದ ಸಭೆೆಯನ್ನು ಕೂಡಾ ಕರೆಯಲಾಗುವುದು ಎಂದು ಹೇಳಿದರು.

ಕೊಳಚೆ ನೀರು ಹರಿಯಬಿಡುವುದು ಹಾಗೂ ತ್ಯಾಜ್ಯ ಎಸೆಯುವ ಮೂಲಕ ನೇತ್ರಾವತಿ ನದಿ ನೀರನ್ನು ಮಲಿನಗೊಳಿಸಲಾಗುತ್ತಿರುವ ಕುರಿತು ಕ್ರಮ ಕೈಗೊಂಡ ಬಗ್ಗೆ ಕೇಳಲಾದ ಪತ್ರಕರ್ತರ ಪ್ರಶ್ನೆಗೆ ನಿರುತ್ತರರಾದ ಪುರಸಭಾಧ್ಯಕ್ಷರು, ಪುರಸಭಾ ವ್ಯಾಪ್ತಿಯಲ್ಲಿ ನನೆಗುದಿಗೆ ಬಿದ್ದಿರುವ ಒಳಚರಂಡಿ ಯೋಜನೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವ ನಿಟ್ಟಿನಲ್ಲಿ ಈಗಾಗಲೇ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರೊಂದಿಗೆ ಚರ್ಚಿಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಪುರಸಭಾ ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು ಮಾತನಾಡಿ, ಬಂಟ್ವಾಳ ಪೇಟೆ ಅಗಲೀಕರಣಕ್ಕೆ ನಾವು ಬದ್ಧರಿದ್ದೇವೆ. ಸಹಾಯಕ ಕಮಿಷನರ್ ನೇತೃತ್ವದಲ್ಲಿ ಇತ್ತೀಚೆಗೆ ಪುರಸಭೆಯಲ್ಲಿ ನಡೆದ ಸಭೆೆಗೆ ವಿಪಕ್ಷ ಸದಸ್ಯರು ಗೈರುಹಾಜರಾಗುವ ಮೂಲಕ ಅಸಹಕಾರ ನೀಡಿದ್ದಾರೆ. ರಸ್ತೆಯಲ್ಲಿ ನಿಂತು ಬೇಕಾಬಿಟ್ಟಿ ಹೇಳಿಕೆ ನೀಡುವ ಬದಲು ಸಭೆೆಗೆ ಬಂದು ಸಲಹೆ ಸೂಚನೆ ನೀಡಲಿ ಎಂದು ವಿರೋಧ ಪಕ್ಷಕ್ಕೆ ಪರೋಕ್ಷವಾಗಿ ಟಾಂಗ್ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News